ಶಿವಮೊಗ್ಗ: ಸಾಮಾಜಿಕ ಜಾಲತಾಣ ಎಷ್ಟೇ ಬೆಳೆದಿದ್ದರೂ ರಂಗದ ಕೂಡ ರಂಗದ ಮೇಲೆ ಯಾವುದೇ ಘಟನಾವಳಿಗಳನ್ನು ನೋಡಿ ಸಂಭ್ರಮಿಸುವ ಪರಿಯೇ ಬೇರೆಯಾಗಿದ್ದು, ಅಂತಹ ರಂಗಭೂಮಿಯನ್ನು ರಂಗಾಯಣ ಇನ್ನಷ್ಟು ಗಟ್ಟಿಗೊಳಿಸಿದೆ ಎಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಸಹ ಕಾರ್ಯವಾಹ ಪಟ್ಟಾಭಿರಾಮ ಹೇಳಿದರು.
ಮೈಸೂರು ರಂಗಾಯಣ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ ಎಸ್.ಎಲ್.ಭೈರಪ್ಪನವರ ‘ಪರ್ವ’ ಕಾದಂಬರಿಯ ಮಹಾರಂಗಪರ್ವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಕಥೆಯನ್ನು ಮುಖಾಮುಖಿಯಾಗಿ ರಂಗದ ಮೇಲೆ ನೋಡಿದರೆ ಹೆಚ್ಚಿನ ಆಪ್ತತೆ ಇರುವುದರ ಜತೆಗೆ ಮನಸ್ಸಿನಲ್ಲಿಯೂ ಹೆಚ್ಚು ಕಾಲ ಉಳಿಯಲಿದೆ ಎಂದರು.ಮಹಾಭಾರತ ಭಾರತೀಯ ಮೂಲದ ಕಥೆಯಾಗಿದ್ದು, ಇಡೀ ಭಾರತೀಯ ಸಂಸ್ಕೃತಿಯನ್ನು ಇದು ಪ್ರತಿಬಿಂಬಿಸುತ್ತದೆ. ನಮ್ಮಲ್ಲಿರುವ ಭಾವನೆಗಳಿಗೆ ಇದು ಇನ್ನಷ್ಟು ಪುಷ್ಟಿ ನೀಡುತ್ತದೆ. ಮಹಾಭಾರತ ಹಾಗೂ ರಾಮಾಯಣದ ಬಗ್ಗೆ ಯಾರು ಏನೇ ಹೇಳಿದರೂ ಇವು ರಾಷ್ಟ್ರೀಯತೆಯನ್ನು ಪ್ರಚುರಪಡಿಸುತ್ತವೆ. ವ್ಯಕ್ತಿ ರಾಷ್ಟ್ರಕ್ಕಾಗಿ ಬದುಕಬೇಕೆಂಬುದನ್ನು ಹೇಳುತ್ತವೆ ಎಂದರು.
ಮಹಾಭಾರತವನ್ನು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಲೇಖಕರು ವ್ಯಾಖ್ಯಾನ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಎಲ್ಲಾ ಭಾಷೆಗಳಲ್ಲಿಯೂ ಇಂತಹ ವ್ಯಾಖ್ಯಾನಗಳಿವೆ. ಕನ್ನಡದಲ್ಲಿ ಕುಮಾರವ್ಯಾಸನ ಆದಿಯಾಗಿ ಅನೇಕರು ಪ್ರಸ್ತುತತೆಗೆ ತಕ್ಕಂತೆ ಕಥೆ ಹೊಂದಿಸಿಕೊAಡು ಬರೆದಿದ್ದಾರೆ. ಅದೇ ರೀತಿಯಲ್ಲಿ ಭೈರಪ್ಪನವರು ಕೂಡ ಆಧುನಿಕ ಪ್ರಪಂಚಕ್ಕೆ ತಕ್ಕಂತೆ ಕಾದಂಬರಿ ಕಟ್ಟಿ ಕೊಟ್ಟಿದ್ದಾರೆ. ಅದನ್ನು ಪ್ರಕಾಶ್ ಬೆಳವಾಡಿ ರಂಗ ರೂಪಕ್ಕೆ ಇಳಿಸಿರುವುದು ಇನ್ನಷ್ಟು ಮಹತ್ವ ಪಡೆದಂತಾಗಿದೆ ಎಂದರು.ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ಆಡಳಿತಾಕಾರಿ ಡಾ. ಶೈಲಜಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ರಂಗ ಸಮಾಜದ ಸದಸ್ಯ ಆರ್.ಎಸ್. ಹಾಲಸ್ವಾಮಿ ಇದ್ದರು.