ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ ಎನ್.ಎಫ್.ಎಸ್.ಎ. ಯೋಜನೆ ಯಡಿಯಲ್ಲಿ ಮೇ ತಿಂಗಳಿಂದ ಸಾರವರ್ಧಿತ ಅಕ್ಕಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಚಿವ ಸಂಪುಟ ಸರ್ಕಾರಿ ಕಾರ್ಯಕ್ರಮಗಳ ಅಡಿಯಲ್ಲಿ ಸಾರವರ್ಧಿತ ಅಕ್ಕಿ ವಿತರಿಸುವ ಯೋಜನೆಗೆ ಅನುಮೋದನೆ ನೀಡಿದ್ದು, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮತ್ತು ರಾಜ್ಯ ಏಜೆನ್ಸಿಗಳು ಈಗಾಗಲೇ ಪೂರೈಕೆ ಮತ್ತು ವಿತರಣೆಗಾಗಿ ಸಾರವರ್ಧಿತ ಅಕ್ಕಿಯನ್ನು ಸಂಗ್ರಹಿಸಿವೆ ಎಂದರು.ಈ ಯೋಜನೆ ಪ್ರಥಮ ಹಂತದಲ್ಲಿ 14 ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ನಂತರ ಉಳಿದ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಆಹಾರದ ಪೌಷ್ಠಿಕಾಂಶದ ಗುಣಮಟ್ಟ ಸುಧಾರಿಸಲು, ಆರೋಗ್ಯ ಪ್ರಯೋಜನ ಒದಗಿಸಲು ಆಹಾರದಲ್ಲಿ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಹೆಚ್ಚಿಸುವುದು ಸಾರವರ್ಧಿತ ಅಕ್ಕಿ ವಿತರಣೆ ಉದ್ದೇಶವಾಗಿದೆ ಎಂದರು.ಸಾಮಾನ್ಯ ಅಕ್ಕಿಗೆ ಪೋಷಕಾಂಶಗಳನ್ನು ಸೇರಿಸಲು ವಿವಿಧ ತಂತ್ರಜ್ಞಾನಗಳು ಲಭ್ಯವಿದೆ.
ಉದಾಹರಣೆಗೆ ಲೇಪ, ಧೂಳು ಮತತ್ಉ ಹೊರ ತೆಗೆಯುವಿಕೆ ಹಾಗೂ ಕೊನೆಯದಾಗಿ ಎಕ್ಸ್ ಟ್ರೂಡರ್ ಯಂತ್ರ ಬಳಸಿಕೊಂಡು ಮಿಶ್ರಣದಿಂದ ಸಾರವರ್ಧಿತ ಅಕ್ಕಿ ಕಾಳುಗಳನ್ನು ಉತ್ಪಾದಿಸಲಾಗುವುದು. ಸಾರವರ್ಧಿತ ಅಕ್ಕಿ ಉತ್ಪಾದಿಸಲು ಸಾಮಾನ್ಯ ಅಕ್ಕಿಯೊಂದಿಗೆ ಸಾರವರ್ಧಿತ ಅಕ್ಕಿ ಕಾಳುಗಳನ್ನು ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ ಎಂದರು.ಒಂದು ಕ್ವಿಂಟಾಲ್ ಪಡಿತ ಅಕ್ಕಿಗೆ ಒಂದು ಕೆಜಿ ಸಾರವರ್ಧಿತ ಅಕ್ಕಿ ಬೆರೆಸಲಾಗುವುದು. ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನನದ ಊಟ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ವಿತರಿಸುವ ಅಕ್ಕಿಯನ್ನು 2024 ರವರೆಗೆ ಬಲಪಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ ಎಂದರು.ಜಿಲ್ಲೆಯಲ್ಲಿ ಬಿಪಿಎಲ್, ಎಪಿಎಲ್, ಅಂತ್ಯೋದಯ 4,91,049 ಕಾರ್ಡ್ ಗಳಿದ್ದು, ಇದರಲ್ಲಿ 3,88,907 ಬಿಪಿಎಲ್ ಕಾರ್ಡ್ ಗಳಿವೆ. ಈ ಕಾರ್ಡ್ ದಾರರಿಗೆ ಸಾರವರ್ಧಿತ ಅಕ್ಕಿ ವಿತರಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥ್, ಎಫ್.ಸಿ.ಐ. ಜನರಲ್ ಮ್ಯಾನೇಜರ್ ಭಗವಾನ್ ಸಿಂಗ್, ಶಿವಕುಮಾರ್ ಇದ್ದರು.