ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೇ 10ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಧ್ರುವನಾರಾಯಣ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಕೆಪಿಸಿಸಿ ವತಿಯಿಂದ 9 ತಂಡಗಳನ್ನು ರಚಿಸಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದು, ಕೊನೆಯದಾಗಿ ಶಿವಮೊಗ್ಗದಲ್ಲಿ ರ್ಯಾಲಿ ನಡೆಸಲಾಗುತ್ತಿದೆ ಎಂದರು.ಮೇ 10ರಂದು ಬೆಳಿಗ್ಗೆ 11 ಗಂಟೆಗೆ ಅಶೋಕ ವೃತ್ತದಿಂದ ಪ್ರತಿಭಟನಾ ರ್ಯಾಲಿ ಆರಂಭವಾಗಿ ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಭೋವಿ ಸಮುದಾಯ ಭವನ ತಲುಪಲಿದೆ. ನಂತರ ಅಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಕಾಮಗಾರಿಗಳಲ್ಲಿ ಶೇ. 40ರಷ್ಟು ಕಮಿಷನ್ ಪಡೆಯುವುದನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಕೆ.ಎಸ್.ಈಶ್ವರಪ್ಪ ಅವರ ತಲೆದಂಡವಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಸದನದಲ್ಲಿ ಸರ್ಕಾರ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಆದರೆ, ದಿನದಿಂದ ದಿನಕ್ಕೆ ಈ ಹಗರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದು ರಾಜ್ಯದಲ್ಲಿ ನಡೆದ ದೊಡ್ಡ ಹಗರಣವಾಗಿದೆ. ಇಂತಹ ಹಗರಣವನ್ನು ಸಿಐಡಿ ತನಿಖೆ ವಹಿಸಲಾಗಿದೆ. ಆದರೆ, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದರು.ರಸಗೊಬ್ಬರ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ.
ಬಹುಮತ ಇಲ್ಲದಿದ್ದರೂ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ನಡೆಸುತ್ತಿದೆ ಎಂದ ಅವರು, ಮುಂದಿನ ಚುನಾವಣೆ ದೃಷ್ಟಿ ಇಟ್ಟುಕೊಂಡು ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 75 ಲಕ್ಷ ಸದಸ್ಯತ್ವ ನೊಂದಣಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 1.58 ಲಕ್ಷ ಸದಸ್ಯತ್ವ ನೊಂದಣಿಯಾಗಿದೆ ಎಂದರು.ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರವಿದ್ದಾಗ ಹಮ್ಮಿಕೊಂಡಿದ್ದ ಜನಪರ ಯೋಜನೆಗಳನ್ನು ಜನರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ. ರಾಜ್ಯ ಸರ್ಕಾರ ಎಸ್ಸಿ/ಎಸ್ಟಿ ಅನುದಾನವನ್ನು ಸಹ ಕಡಿಮೆ ಮಾಡಿದೆ. ನಿಗಮಗಳಿಗೆ ಹಣ ನೀಡುತ್ತಿಲ್ಲ. ಹೀಗೆ ಪ್ರತಿ ಕ್ಷೇತ್ರದಲ್ಲೂ ಸರ್ಕಾರ ವಿಫಲವಾಗಿದೆ ಎಂದು ದೂರಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಆಡಳಿತ ನೀಡಲು ವಿಫಲರಾಗಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದ ಅವರು ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಪ್ರತಿಭಟನಾ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಪ್ರಮುಖರಾದ ಆರ್. ಎಂ. ಮಂಜುನಾಥಗೌಡ, ಶಾಂತವೀರಪ್ಪಗೌಡ, ಇಸ್ಮಾಯಿಲ್ ಖಾನ್, ಬಲದೇವ ಕೃಷ್ಣ, ಡಾ. ಶ್ರೀನಿವಾಸ್ ಕರಿಯಣ್ಣ, ಎಸ್.ಪಿ. ಶೇಷಾದ್ರಿ, ಸಿ.ಎಸ್. ಚಂದ್ರಭೂಪಾಲ್, ವಿಶ್ವನಾಥ್ ಕಾಶಿ, ಕಲಗೋಡು ರತ್ನಾಕರ್, ವಿಜಯಲಕ್ಷ್ಮೀ ಪಾಟೀಲ್, ಎಂ. ಚಂದನ್, ವೈ.ಹೆಚ್. ನಾಗರಾಜ್. ಹೆಚ್.ಪಿ. ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.