ಉದ್ಯಮಿ ರಿಚರ್ಡ್ ಬ್ರಾನ್ಸನ್ ಕುರಿತು ಪತ್ರಿಕೆಯೊಂದು ಸತತ ಆರು ವರ್ಷ ಟೀಕೆಗಳನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಿತು. ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಬ್ರಾನ್ಸನ್ ಅವರನ್ನು ಪತ್ರಿಕೆಯ ಪ್ರತಿನಿಧಿಯು ಟೀಕೆಗಳ ಬಗ್ಗೆ ಕೆಣಕಿದಾಗ, ‘ನಾನು ನಿಮ್ಮ ಪತ್ರಿಕೆಯ ಓದುಗನಲ್ಲ. ಇಷ್ಟು ದೀರ್ಘಕಾಲ ಟೀಕಿಸುವಷ್ಟು ಯೋಗ್ಯತೆಯನ್ನು ನನ್ನಲ್ಲಿ ಗುರುತಿಸಿದ್ದಕ್ಕೆ ಥ್ಯಾಂಕ್ಸ್’ ಎಂದು ಹೇಳಿ ಹೊರಟುಹೋದರು.
ಟೀಕಾಕಾರರ ಬಗ್ಗೆ ಬ್ರಾನ್ಸನ್ ಹೇಳುವ ಮಾತುಗಳು ತುಂಬ ಗಮನಾರ್ಹವಾಗಿವೆ. ‘ಟೀಕಾಕಾರರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರಿ. ಟೀಕೆ ಮಾಡುವವರನ್ನು ನಿರ್ಲಕ್ಷಿಸುವುದು ಅವರಿಗೆ ಕೊಡುವ ದೊಡ್ಡ ಶಿಕ್ಷೆ. ಟೀಕಾಕಾರರಿಗೆ ಉತ್ತರಿಸದಿರುವುದು ಒಳ್ಳೆಯದು. ಅನಿವಾರ್ಯವಾದರೆ ಚುಟುಕಾಗಿ ಉತ್ತರಿಸಿ’ ಎಂದು ಬ್ರಾನ್ಸನ್ ಹೇಳುತ್ತಾರೆ.
ಕೆಲವರಿಗೆ ನಿಮ್ಮ ಏಳಿಗೆ ಸಹಿಸುವುದು ಆಗುವುದಿಲ್ಲ. ಅವರಲ್ಲಿ ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಕುದಿಯುತ್ತಿರುತ್ತದೆ. ಇವರೆಲ್ಲ ಹಿತಚಿಂತಕರ ವೇಷ ಧರಿಸಿರುತ್ತಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು. ಟೀಕೆಗಳಿಗೆ ಹೆದರಿದರೆ ಅವರು ಹೆಚ್ಚು ತೊಂದರೆ ಕೊಡಲು ಮುಂದಾಗಬಹುದು.
ರಾಜಕೀಯ ರಂಗಕ್ಕೆ ಬಂದ ಮಹಿಳೆಯರ ಬಗ್ಗೆ ಅತಿಹೆಚ್ಚು ಟೀಕೆಗಳು ಬರುತ್ತವೆ. ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಹೆಣ್ಣುಮಕ್ಕಳ ಬಗ್ಗೆಯೂ ಹಲವು ಟೀಕೆಗಳು, ಹೊಟ್ಟೆಕಿಚ್ಚಿನ ಮಾತುಗಳು ಕೇಳಿಬರುತ್ತಿರುತ್ತವೆ.ಮೊದಲಿಗೆ ಅವರ ಚಾರಿತ್ರ್ಯವಧೆಗೆ ಕಲ್ಪಿತ ಟೀಕೆಗಳು ಆರಂಭವಾಗುತ್ತವೆ. ಅಂಥ ಮಾತುಗಳಿಗೆ ಮಹಿಳೆಯರು ತಕ್ಷಣ ಹೆದರುತ್ತಾರೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ರಾಜಕೀಯ ರಂಗದಲ್ಲಿ ಬೆಳೆಯದಂತೆ ವಿರೋಧಿಗಳು ಹುನ್ನಾರ ನಡೆಸುತ್ತಾರೆ.
ಹೀಗಾಗಿ ರಾಜಕೀಯಕ್ಕೆ ಬರುವ ಹೆಣ್ಣುಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಮಹಿಳಾ ರಾಜಕಾರಣಿಗಳು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಆಗ ‘ದಪ್ಪ ಚರ್ಮದವಳು’ ಎಂದು ಕೆಲವರು ಟೀಕೆ ಮಾಡಬಹುದು. ಅದನ್ನು ನಿರ್ಲಕ್ಷಿಸಿ ಉತ್ತಮ ರೀತಿಯಲ್ಲಿ ಸಾರ್ವಜನಿಕ ಕೆಲಸ ಮಾಡಿ ಬೆಳೆಯಬೇಕು. ಆಗ ವಿರೋಧಿಗಳೇ ಅಭಿಮಾನಿಗಳಾಗುತ್ತಾರೆ, ಹೊಗಳತೊಡಗುತ್ತಾರೆ.
ಎಲ್ಲರ ಬದುಕಿನಲ್ಲಿ ಟೀಕೆಗಳು ಇದ್ದೇ ಇರುತ್ತವೆ. ಇದು ಬದುಕಿನ ಒಂದು ಭಾಗ. ಟೀಕೆಗಳ ನಡುವೆಯೇ ಬದುಕಬೇಕು ಮತ್ತು ಬೆಳೆಯಬೇಕು. ಯಾವುದೇ ಊರಿಗೆ ಹೋದರೂ ಯಾವುದೇ ದೇಶಕ್ಕೆ ಹೋದರೂ ಟೀಕಾಸ್ತ್ರಗಳ ಕಾಟ ತಪ್ಪದು. ‘ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ… ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ, ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂದು ಅಕ್ಕಮಹಾದೇವಿ ಹೇಳಿದ ವಚನವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ದಕ್ಷಿಣ ಆಫ್ರಿಕಾದಲ್ಲಿ ಜೈಲು ಅಧಿಕಾರಿಯಾಗಿದ್ದ ಜನರಲ್ ಸ್ಮಟ್ಸ್ ತಮ್ಮ ಒಂದು ಬರಹದಲ್ಲಿ, ‘ಗಾಂಧಿ ನಮ್ಮ ಕಾರಾಗೃಹದಲ್ಲಿದ್ದಾಗ ಬಹಳಷ್ಟು ಹಿಂಸೆ ಕೊಟ್ಟೆ. ಸಾಮಾನ್ಯ ಕೈದಿಯಾಗಿ ಪರಿಗಣಿಸಿದೆ. ಚರ್ಮ ಹದ ಮಾಡುವ ಕೆಲಸಕ್ಕೆ ಹಚ್ಚಿದೆ. ಆತ ಚರ್ಮ ಹದ ಮಾಡುವುದರೊಂದಿಗೆ ಚಪ್ಪಲಿ ಹೊಲೆಯುವುದನ್ನೂ ಕಲಿತುಕೊಂಡ. ಕಾರಾಗೃಹದಿಂದ ಬಿಡುಗಡೆಯಾಗಿ ಹೋಗುವಾಗ ಹುಡುಕಿಕೊಂಡು ಬಂದು ನನಗೆ ಪಾದರಕ್ಷೆ ಉಡುಗೊರೆ ನೀಡಿದ. ಆ ಮನುಷ್ಯನ ವಿನಯ ಮತ್ತು ಸಹನೆ ನಿಜಕ್ಕೂ ದೊಡ್ಡದು’ ಎಂದು ದಾಖಲಿಸಿದ್ದಾರೆ. ಗಾಂಧೀಜಿ ಉಪ್ಪಿನ ಸತ್ಯಾಗ್ರಹಕ್ಕೆ ಹೊರಡುವ ಮೊದಲು ತಾವು ಆಯ್ಕೆ ಮಾಡಿದ 78 ಸತ್ಯಾಗ್ರಹಿಗಳಿಗೆ ‘ಎಲ್ಲ ಟೀಕೆಗಳನ್ನು ದೃಢ ಮನಸ್ಸಿನಿಂದ ಸಹಿಸಿಕೊಳ್ಳಬೇಕು, ಪ್ರತಿಕ್ರಿಯೆ ನೀಡಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಟೀಕೆಗಳನ್ನು ತಿದ್ದುವ ಟೀಕೆ ಮತ್ತು ಅದ್ದುವ (ಮುಳುಗಿಸುವ) ಟೀಕೆ ಎಂದು ವಿಂಗಡಿಸಲಾಗುತ್ತದೆ. ನಿಮ್ಮ ಏಳಿಗೆಗಾಗಿ ರಚನಾತ್ಮಕವಾಗಿ ಟೀಕೆ ಮಾಡಿದರೆ ಅದರಿಂದ ನಮ್ಮ ಮಾರ್ಗ ತಿದ್ದಿಕೊಂಡು ನಡೆಯಲು ಸಹಾಯವಾಗುತ್ತದೆ. ಆದರೆ ಅದ್ದುವ ಟೀಕೆಯನ್ನು ನಿರ್ಲಕ್ಷಿಸುವುದು ಉತ್ತಮ ಮಾರ್ಗ.
ನಿಂದಕರ ಕುರಿತ ಪುರಂದರದಾಸರ ಒಂದು ಕೀರ್ತನೆ ತುಂಬ ಖಾರವಾಗಿದೆ: ‘ನಿಂದಕರಿರಬೇಕು ನಿಂದಕರಿರಬೇಕು, ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ, ಅಂದಂದು ಮಾಡಿದ ಪಾಪದ ಮಾಮಲ, ತಿಂದು ಹೋಗುವರಯ್ಯ ನಿಂದಕರು’.
ಪ್ರಸಿದ್ಧ ಕಾರ್ಟೂನಿಸ್ಟ್ ಶಂಕರ್ 1960- 70ರ ದಶಕಗಳಲ್ಲಿ ಕಾರ್ಟೂನುಗಳಿಗೇ ಮೀಸಲಾದ ‘ಶಂಕರ್ಸ್ ವೀಕ್ಲಿ’ ಪ್ರಕಟಿಸುತ್ತಿದ್ದರು. ಪ್ರಧಾನಿ ಯಾಗಿದ್ದ ಜವಾಹರಲಾಲ್ ನೆಹರೂ ಅವರ ಸ್ವಾರಸ್ಯಕರ ವ್ಯಂಗ್ಯಚಿತ್ರಗಳು ಆ ಪತ್ರಿಕೆಯ ಮುಖ್ಯ ಆಕರ್ಷಣೆಯಾಗಿದ್ದವು. ನೆಹರೂ ಪ್ರತಿವಾರ ಪತ್ರಿಕೆ ಯನ್ನು ತರಿಸಿ ಓದುತ್ತಿದ್ದರು. ನೆಹರೂ ವ್ಯಂಗ್ಯಚಿತ್ರದಲ್ಲಿ ಅವರ ಅಂಗಿಯ ಮೇಲೆ ಗುಲಾಬಿ ಹೂ ಇರುತ್ತಿತ್ತು. ಇದನ್ನು ಬಹುವಾಗಿ ಮೆಚ್ಚಿಕೊಂಡ ನೆಹರೂ ಅವರು ತಮ್ಮ ಕೋಟಿನ ಮೇಲೆ ಗುಲಾಬಿ ಹೂ ಧರಿಸತೊಡಗಿದರು.ಟೀಕೆಗಳನ್ನು ಕೆಲವೊಮ್ಮೆ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ.
‘ಬೈದವರೆನ್ನ ಬಂಧುಗಳೆಂಬೆ…’ ಎಂದು ಬಸವಣ್ಣನವರು ಹೇಳಿದ ವಚನ ಕೂಡ ಇಲ್ಲಿ ನೆನಪಾಗುತ್ತದೆ.
ನಾವು ಸಾಗುವ ಜೀವನದ ಹಾದಿಯಲ್ಲಿ ಹಲವು ಕಲ್ಲು ಮುಳ್ಳುಗಳು, ನೋವು ನಲಿವುಗಳು ಇದ್ದೇ ಇರುತ್ತದೆ…ನಮ್ಮನ್ನು ಇಷ್ಟ ಪಡುವವರು ಇರುತ್ತಾರೆ…ನಮ್ಮನ್ನು ಟೀಕಿಸುವವರು ಇದ್ದೆ ಇರುತ್ತಾರೆ…ರಸಭರಿತ ಕಳಿತ ಮಾವಿನ ಹಣ್ಣಿಗೆ ಜನರು ಕಲ್ಲು ಹೊಡೆಯುವುದು…ಅಲ್ವಾ..ಏಕೆಂದರೆ ಅದು ತಿನ್ನಲು ಯೋಗ್ಯವೆಂದು.
ನೇರವಾಗಿರುವ ಮೊಳೆಗೆ ಸುತ್ತಿಗೆಯಿಂದ ಗೋಡೆಗೆ ಹೊಡೆಯುತ್ತಾರೆ.ಡೊಂಕಾದ ಮೊಳೆ ಉಪಯೋಗಕ್ಕೆ ಬಾರದು ಎಂದು ಬಿಸಾಡುತ್ತಾರೆ.ಇದನ್ನೆಲ್ಲಾ ಅರಿತು ನಾವು ಧನಾತ್ಮಕ ಚಿಂತನೆಗಳೊಂದಿಗೆ ಸಾಗುತ್ತಿರಬೇಕು.ನಾವು ಮಾಡುವ ಕೆಲಸದಲ್ಲಿ ಬದ್ಧತೆ, ಶಿಸ್ತು ತಾಳ್ಮೆ,.ಸತತ ಪರಿಶ್ರಮವಿದ್ದರೆ, ಖಂಡಿತ ಯಶಸ್ಸು ಸಾಧಿಸಬಹುದು.
ಪುನೀತ್ ರಾಜ್ ಕುಮಾರ್ ರವರು ಒಂದು ಮಾತು ಹೇಳಿದ್ದಾರೆ…
“ಕಾಮೆಂಟ್ ಮಾಡೋರೆಲ್ಲಾ ಕೆಲಸನೆ ಮಾಡೋರಲ್ಲ.” ಈ ಮಾತನ್ನು ನೆನಪಿಟ್ಟುಕೊಂಡು ಮುಂದೆ ಸಾಗುತ್ತಿರಬೇಕು.
ನಮಗೆ ಶತ್ರುಗಳು ಹುಟ್ಟಬೇಕು ಅಂದ್ರೆ,ನಾವು ಕೆಟ್ಟ ಕೆಲಸ ಮಾಡಬೇಕೆಂದಿಲ್ಲ…ಒಳ್ಳೆಯ ಕೆಲಸ ಮಾಡುತ್ತಾ ಸಾಗಿದರೂ, ಶತ್ರುಗಳು ಹುಟ್ಟಿಕೊಳ್ಳುತ್ತಾರೆ.ಎಲ್ಲರೂ ಎಲ್ಲರನ್ನು ಮೆಚ್ಚುವುದಿಲ್ಲ..ನಾವು ಮಾಡುವ ಕೆಲಸ ನಮ್ಮ ಆತ್ಮ, ಪರಮಾತ್ಮನಿಗೆ ಮೆಚ್ಚುಗೆಯಾದರೆ ಸಾಕು…ಅಲ್ಲವೇ.????ಟೀಕೆಗಳಿಗೆ ನಲುಗದೆ ಯಶಸ್ಸಿನೆಡೆಗೆ ಸಾಗುತ್ತಿರಬೇಕು.