
ಶಿವಮೊಗ್ಗ: ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಸಡಗರ ಸಂಭ್ರಮದಿಂದ ಶಾಲೆ ಆರಂಭಗೊಂಡಿತು. ಕಳೆದೆರಡು ವರ್ಷಗಳಿಂದ ಕೊರೋನಾತಂಕದ ನಡುವೆ ಶಾಲೆಗಳು ಸರಿಯಾದ ಸಮಯಕ್ಕೆ ತೆರೆಯಲಾಗಿರಲಿಲ್ಲ. ಇಂತಹದ್ದೇ ಆತಂಕದ ನೆರಳಿದ್ದರೂ ಈ ಬಾರಿ ಯಾವುದೇ ಅಡೆಯಲ್ಲದೆ ಸರಿಯಾದ ಸಮಯಕ್ಕೆ ಶಾಲೆ ಆರಂಭಗೊಂಡಿದೆ.




ಪ್ರತಿ ಬಾರಿ ಜೂನ್ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗುತ್ತಿತ್ತು.ಈ ಬಾರಿ ಮೇ 16ಕ್ಕೇ ಆರಂಭಗೊಂಡಿದೆ. ಶಾಲೆಯ ಆರಂಭದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಸಡಗರ ಸಂಭ್ರಮದಿಂದ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಬರಮಾಡಿಕೊಂಡರು. ತಳಿರು – ತೋರಣಗಳಿಂದ ಇಡೀ ಶಾಲೆಯನ್ನು ಸಿಂಗರಿಸಲಾಗಿತ್ತು.
ಪುಟ್ಟ ಪುಟ್ಟ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಲಾಯಿತು. ಮಿಕ್ಕಿಮೌಸ್ ಮೊದಲಾದ ಮುಖವಾಡ, ವೇಷಭೂಷಣದೊಂದಿಗೆ ಪಾತ್ರಧಾರಿಗಳು ಗಮನ ಸೆಳೆದರು. ಪುಟ್ಟ ಮಕ್ಕಳು ಅವರನ್ನು ನೋಡಿ ಕಣ್ತುಂಬಿಕೊಂಡರು. ಎಲ್ಲ ಹಿರಿಯ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಒಂದು ರೀತಿಯ ಪ್ರೀತಿಯ ಹೊಸ ವಾತಾವರಣ ಶಾಲೆಯಲ್ಲಿ ಕಂಡುಬಂತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್, ಪೋಷಕರ ನಂಬಿಕೆಯನ್ನು ಪ್ರಿಯದರ್ಶಿನಿ ಶಾಲೆ ಉಳಿಸಿಕೊಡುತ್ತದೆ. ಕಲಿಕೆಗೆ ಹೆಚ್ಚು ಒತ್ತು ಕೊಡುತ್ತೇವೆ. ಪೋಷಕರೂ ನಮ್ಮೊಂದಿಗೆ ಸಹಕರಿಸಬೇಕು. ಸಮಯಕ್ಕೆ ಸರಿಯಾಗಿ ಮಕ್ಕಳನ್ನು ಕಳಿಸಿ ಆಡಳಿತ ಮಂಡಳಿಯೊಂದಿಗೆ ಸಹಕರಿಸಿ. ನೂರಕ್ಕೆ ನೂರರಷ್ಟು ಫಲಿತಾಂಶ ನೀಡುವ ಜವಾಬ್ದಾರಿ ನಮ್ಮದು ಎಂದರು.




ಪ್ರಾಂಶುಪಾಲೆ ಬಿ.ಜೆ. ಸುನಿತಾದೇವಿ ಮಾತನಾಡಿ, ಶಿಕ್ಷಣವೇ ನಮ್ಮ ಆಸ್ತಿ. ನಮ್ಮ ಶಾಲೆಯಲ್ಲಿ ಕೇವಲ ಅಂಕಗಳಿಗೆ ಮಾತ್ರ ಒತ್ತುಕೊಡದೇ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಗಮನ ಹರಿಸುತ್ತೇವೆ. ಓದಿನ ಜೊತೆಗೆ ಕ್ರೀಡೆ, ಕಲೆ, ಸಂಗೀತ, ವ್ಯಾಯಾಮ… ಹೀಗೆ ಎಲ್ಲ ರೀತಿಯ ಶಿಕ್ಷಣವೂ ಇಲ್ಲಿ ಸಿಗುತ್ತದೆ. ಸ್ವಚ್ಛತೆಗೆ ನಾವು ಆದ್ಯತೆ ನೀಡುತ್ತೇವೆ. ಶಿಸ್ತು ಬಹಳ ಮುಖ್ಯ. ಇದನ್ನು ನಮ್ಮ ಶಾಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಪೋಷಕರು ನಮ್ಮೊಂದಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರವೀಣ್ ಇದ್ದರು.