ಬೇಸಿಗೆ ರಜೆ ನಂತರ ಎಲ್ಲಾ ಶಾಲೆಗಳು ಇದೇ ಮೇ ೧೬ರಂದು ಪುನರಾರಂಭಗೊಂಡಿದ್ದು,ಅದರಂತೆ ರೋಟರಿ ಪೂರ್ವ ಶಾಲೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಶಾಲಾ ಶಿಕ್ಷಕಿಯರು ಸ್ವತಃ ರಂಗೋಲಿಯನ್ನು ಬಿಟ್ಟು, ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಪೂರಕವಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಾಗಿತ್ತು.ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ಉಪಾಧ್ಯಕ್ಷರಾದ ರೊ. ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಜಂಟಿ ಕಾರ್ಯದಶಿ(ಆಡಳಿತ) ರೊ. ನಾಗವೇಣಿ ಎಸ್.ಆರ್., ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಮಂಜುನಾಥ್ ಕದಂ, ೨೦೨೨-೨೩ನೇ ಸಾಲಿನ ರೋಟರಿಯ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಸೂರ್ಯನಾರಾಯಣ್ ಆರ್., ಹಾಗೂ ಶಿಕ್ಷಕ ವೃಂದದವರು ಬೇಸಿಗೆ ರಜೆಯ ನಂತರ ಶಾಲೆಗೆ ಮರಳಿ ಬರುತ್ತಿರುವ ಎಲ್ಲಾ ಮಕ್ಕಳಿಗೆ ಗುಲಾಬಿ ಹೂಗಳನ್ನು ಕೊಟ್ಟು, ಸಿಹಿ ಹಂಚಿಕೆ ಮಾಡುವುದರ ಮೂಲಕ ಅವರನ್ನು ಶಾಲೆಗೆ ಸ್ವಾಗತಿಸಿ, ಪ್ರಾರಂಭೋತ್ಸವ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ನಿವೃತ್ತ ಡಿ.ಪಿ.ಐ., ಇವರು ಮಾತನಾಡುತ್ತಾ, ೨೦೨೨-೨೩ನೇ ಶೈಕ್ಷಣಿಕ ವರ್ಷದಲ್ಲಿ ಅವಶ್ಯಕತೆಯಿರುವ ಬೋಧನಾ ವಿಷಯಗಳಿಗೆ ಉತ್ತಮ ಶೈಕ್ಷಣಿಕ ಅರ್ಹತೆವುಳ್ಳ ಹಾಗೂ ಅನುಭವಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಪ್ರಸ್ತುತ ಶಾಲೆಯಲ್ಲಿ ಪೂರ್ಣ ಪ್ರಮಾಣದ ಹಾಗೂ ಅರ್ಪಣಾ ಮನೋಭಾವವುಳ್ಳ ಶಿಕ್ಷಕ ವೃಂದವಿದ್ದು, ಶಾಲೆಯ ಪ್ರಾರಂಭದ ದಿನದಿಂದಲೇ ಎಲ್ಲಾ ವಿಷಯಗಳಲ್ಲಿ ಪಾಠ ಪ್ರವಚನಗಳು ಪ್ರಾರಂಭವಾಗುವುದರಿAದ, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ನಾಳೆಯಿಂದಲೇ ಶಾಲೆಗೆ ಕಳುಹಿಸುವುದರ ಮೂಲಕ ಅವರಿಗೆ ಪಾಠ ಪ್ರವಚನಗಳು ನಷ್ಟವಾಗದಂತೆ ನೋಡಿಕೊಳ್ಳಬೇಕೆಂದು ಕೋರಿದರು. ಅದೇ ರೀತಿ ಈ ವಿಷಯವನ್ನು ಎಲ್ಲಾ ಮಕ್ಕಳು ತಮ್ಮ ಸಹಪಾಠಿಗಳಿಗೆ ಹಾಗೂ ನೆರೆಹೊರೆಯ ಪೋಷಕರಿಗೆ ತಿಳಿಸಿ, ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಬೇಕೆಂದು ಕೋರಿದರು. ಹಾಗೆಯೇ ಶಾಲಾ ಶಿಕ್ಷಕರು, ತಮ್ಮ ಬೋಧನೆಯು ಮಕ್ಕಳಿಗೆ ಒಂದು ಆನಂದದಾಯಕವಾಗುವ ಅನುಭವವಾಗುವಂತೆ ನೋಡಿಕೊಳ್ಳಬೇಕೆಂದು ಕೋರಿದರು. ಉಪಾಧ್ಯಕ್ಷರಾದ ಡಾ. ಪರಮೇಶ್ವರ್ ಡಿ. ಶಿಗ್ಗಾಂವ್ ಇವರು ಮಾತನಾಡುತ್ತಾ, ಶಾಲೆಯನ್ನು ಮಕ್ಕಳ ಪಾಲಿಗೆ ಒಂದು ಚಟುವಟಿಕೆ ಭರಿತ ಹಾಗೂ ಆಕರ್ಷಣಾ ಕೇಂದ್ರವನ್ನಾಗಿ ಮಾಡುವುದರ ಜೊತೆಗೆ ಮಕ್ಕಳಲ್ಲಿ ಆಕಾಶಕಾಯಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಮೂಡಿಸಿದರು.

ಅವರ ವೈಜ್ಞಾನಿಕ ಮನೋಭಾವವನ್ನು ಹಾಗೂ ಆಸಕ್ತಿಯನ್ನು ಬೇಳೆಸಲು ಶಾಲೆಯಲ್ಲಿ ಡಾ. ಅಬ್ದುಲ್ ಕಲಾಂ ಸ್ಪೇಸ್ ಕ್ಲಬ್‌ನ್ನು ಮೇ ೨೦ರಂದು ಪ್ರಾರಂಭಿಸಲಾಗುವುದು ಎಂದು ತಿಳಿಸುತ್ತಾ, ಸುತ್ತಮುತ್ತಲಿನ ಶಾಲೆಯ ಮಕ್ಕಳು ಈ ಕ್ಲಬ್‌ನ ಸದಸ್ಯತ್ವವನ್ನು ಪಡೆದು ಕ್ಲಬ್‌ನ ಚಟುವಟಿಕೆಗಳ ಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ಕರೆಕೊಟ್ಟರು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಸುತ್ತಮುತ್ತಲಿನ ಶಾಲೆಗಳ ಶಿಕ್ಷಕರಿಗೆ ಮನವರಿಕೆ ಮಾಡಿ, ಹೆಚ್ಚು ಹೆಚ್ಚು ಮಕ್ಕಳು ಈ ಕ್ಲಬ್‌ನ ಸದಸ್ಯತ್ವವನ್ನು ಪಡೆಯುವಂತೆ ಮಾಡಬೇಕೆಂದು ಕೋರಿದರು.

ವರದಿ ಮಂಜುನಾಥ್ ಶೆಟ್ಟಿ…