ಶಿವಮೊಗ್ಗ: ಸ್ಮಾರ್ಟ್ ಸಿಟಿ ಅಧಿಕಾರಿಗಳ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಬದಲು ಕೆರೆಸಿಟಿಯಾಗಿ ಪರಿವರ್ತನೆಯಾಗಿದೆ ಎಂದು ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿವಮೊಗ್ಗದ ಜನಜೀವನ ಅಸ್ತವ್ಯಸ್ತವಾಗಿದೆ. ಇಡೀ ನಗರ ಕೆರೆ ಅಂಗಳವಾಗಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಸ್ಮಾರ್ಟ್ ರಸ್ತೆಗಳೆಲ್ಲಾ ಹೊಳೆಯಂತಾಗಿ ಬಡಾವಣೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದೆ ಎಂದು ದೂರಿದರು.
ವಾಹನ ಸಂಚಾರ ಕಷ್ಟವಾಗಿದೆ. ರಸ್ತೆಗಳೆಲ್ಲಾ ಗುಂಡಿಗಳಿಂದ ತುಂಬಿ ಹೋಗಿದೆ. ಮಹಿಳೆಯರು ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಹೀಗೆ ಮಳೆ ಮುಂದುವರೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕು.

ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು. ಅಪೂರ್ಣವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸ್ಮಾರ್ಟ್‍ಸಿಟಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂಡ್ಲೆ, ಎನ್.ಎಸ್.ಯು.ಐ. ರಾಜ್ಯ ಕಾರ್ಯದರ್ಶಿ ಬಾಲಾಜಿ, ಪ್ರಮುಖರಾದ ಕೆ. ದೇವೇಂದ್ರಪ್ಪ, ಶರತ್, ವಿನೋದ್, ಪ್ರದೀಪ, ರಘು, ಪ್ರಮೋದ್, ರಾಘವೇಂದ್ರ, ಪುರಲೆ ಮಂಜು, ಸುರೇಶ್, ಅರ್ಜುನ್, ಸಂದೀಪ್, ಮಂಜುನಾಥ, ವಿನ್ಯಾಸ್, ಭರತ್, ಚಂದನ್, ವಿನಯ್ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…