ಶಿವಮೊಗ್ಗ : ಇಂದು ಬಂದು ನಾಳೆ ಹೋಗುವ ಅಧಿಕಾರಕ್ಕಿಂತ ನಾವು ರೂಡಿಸಿಕೊಂಡ ವ್ಯಕ್ತಿತ್ವವೇ ಬದುಕಿನಲ್ಲಿ ಎಂದೆಂದಿಗೂ ಶಾಶ್ವತ ಎಂದು ಆಂಧ್ರಪ್ರದೇಶ ಕೃಷಿ ಸಹಕಾರಿ ಇಲಾಖೆ ಸಚಿವರಾದ ಕಾಕನಿ ಗೋವರ್ಧನ ರೆಡ್ಡಿ ಹೇಳಿದರು.

ಇಂದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ – ನೆನಪಿನ ಅಂಗಳ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಓರ್ವ ವ್ಯಕ್ತಿಯ ಉನ್ನತಿಕರಣದಲ್ಲಿ ಶಿಕ್ಷಕರ ಹಾಗೂ ವಿದ್ಯಾ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಅಂತಹ ಅದ್ಭುತ ಸ್ಪಂದನೆ ನನಗೆ ಕಲಿಸಿದ ಶಿಕ್ಷಕರಿಂದ, ವಿದ್ಯಾಸಂಸ್ಥೆಗಳಿಂದ ದೊರೆತ್ತಿದ್ದರಿಂದಲೇ ಯಶಸ್ಸಿನ ಹಾದಿಯೆಡೆಗೆ ಸಾಗಲು ನನಗೆ ಸಾಧ್ಯವಾಯಿತು. ಇತರರ ಕೈ ಕೆಳಗೆ ಕೆಲಸ ಮಾಡಲು ಇಚ್ಚೆಯಾಗದೇ ಸಿವಿಲ್ ಕನ್ಸಲ್ಟೆಂಟ್ ಆಗಿ ಸ್ವಂತ ಉದ್ಯಮ ಪ್ರಾರಂಭಿಸಿದೆ. ಅನೇಕ ಸವಾಲುಗಳ ನಂತರ ಉತ್ತಮ ಉದ್ಯಮಿಯಾಗಿ ಹೊರಹೊಮ್ಮಿದೆ. ನಂತರ ರಾಜಶೇಖರ ರೆಡ್ಡಿ ಅವರ ನಾಯಕತ್ವದಲ್ಲಿ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದೆ. ಪ್ರಸ್ತುತ ಜಗನ್ ಮೋಹನ್ ರೆಡ್ಡಿ ಅವರ ಸಂಪುಟದ ಅತಿ ಸೂಕ್ಷ್ಮ ಇಲಾಖೆಯಾದ ಕೃಷಿ ಮತ್ತು ಸಹಕಾರ ಇಲಾಖೆಯ ಸಚಿವನಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಕೃಷಿಯಾಧಾರಿತ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣ ಸಂದಾಯವಾಗುವ ವ್ಯವಸ್ಥೆಯನ್ನು ಆಂಧ್ರಪ್ರದೇಶ ಸರ್ಕಾರ ಅನುಷ್ಟಾನಗೊಳಿಸಿದೆ.

ಶಿವಮೊಗ್ಗ ಜಿಲ್ಲೆ ಎಂದರೇ ನನಗೆ ಭಾವನಾತ್ಮಕ ನಂಟು : ವಿದ್ಯಾಭ್ಯಾಸದ ಸಂದರ್ಭದಲ್ಲಿ ಇಲ್ಲಿ ಕಳೆದ ಅನೇಕ ಕ್ಷಣಗಳು ಅವಿಸ್ಮರಣೀಯ. ಶಿವಮೊಗ್ಗ ಪ್ರವೇಶಿಸಿದಾಗ ಒಮ್ಮೇಲೆ ಹೃದಯ ತುಂಬಿ ಬಂದಿತ್ತು. ಹೆಚ್.ಪಿ.ಸಿ, ವೀರಭದ್ರೇಶ್ವರ ಟಾಕೀಸು, ಗುರು ರಾಘವೇಂದ್ರ ದೇವಾಲಯ, ವೆಂಕಟೇಶ್ವರ ನಿಲಯದ ಹಳೆಯ ರೂಂ, ಮೀನಾಕ್ಷಿ ಭವನದ ಬೆಣ್ಣೆ ದೋಸೆ , ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ಎಂದೆದಿಗೂ ಮರೆಯಲಾಗದು.

ಕನ್ನಡದಲ್ಲಿಯೇ ಮಾತು ಪ್ರಾರಂಭಿಸಿದ ಸಚಿವರು : ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಕನ್ನಡದಲ್ಲಿ ಮಾತನಾಡುವಾಗ ಒಂದು ರೀತಿಯ ರೋಮಾಂಚನವಾಗುತ್ತಿದೆ. ಕನ್ನಡದ ಹಳೆಯ ಹಾಡುಗಳು ಮನಸ್ಸಿನಲ್ಲಿ ಸದಾ ಗುನುಗುತ್ತಿರುತ್ತದೆ ಎಂದು ಹೇಳಿದರು.

ಇದೇ ವೇಳೆ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಒಂದು ಸಾವಿರ ಜನ ಆಸನ ಸಾಮರ್ಥ್ಯವಿರುವ ಹಳೆಯ ವಿದ್ಯಾರ್ಥಿಗಳ‌ ಸಭಾಂಗಣಕ್ಕೆ ವೈಯುಕ್ತಿಕವಾಗಿ ಐದು ಲಕ್ಷ ರೂಪಾಯಿಗಳ ಸಹಾಯಧನ ಘೋಷಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಏಳು ಜನ ಹಳೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಎಸ್ ಅರುಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ , ಹೆಚ್.ಸಿ.ಶಿವಕುಮಾರ್, ಸುಧೀರ್, ಕುಲಸಚಿವರಾದ ಪ್ರೊ.ಹೂವಯ್ಯಗೌಡ, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ.ಸುರೇಂದ್ರ , ಉಪಾಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಕಾರ್ಯದರ್ಶಿಗಳಾದ ಡಾ.ಕೆ.ಎಂ.ಬಸಪ್ಪಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…