ಶಿವಮೊಗ್ಗ: ಮಳೆಹಾನಿಗೊಳಗಾದ ಆರ್.ಎಂ.ಎಲ್. ನಗರ ನಿವಾಸಿಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಆರ್.ಎಂ.ಎಲ್. ನಗರ ನಾಗರೀಕ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮೇ 19ರಂದು ಶಿವಮೊಗ್ಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಆರ್.ಎಂ.ಎಲ್. ನಗರದಲ್ಲಿ ರಸ್ತೆ, ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳು, ಉಡುಪುಗಳು, ಧವಸಧಾನ್ಯ ಹಾಗೂ ವಾಹನಗಳು ಸೇರಿದಂತೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ರೀತಿಯ ಅವಾಂತರಕ್ಕೆ ಇಲ್ಲಿನ ಮೂಲಭೂತ ಸೌಕರ್ಯಗಳಾದ ರಾಜಕಾಲುವೆ ಕಾಮಗಾರಿ, ರಸ್ತೆಗಳು ಸರಿಯಾದ ಸಮಯದಲ್ಲಿ ಪೂರ್ಣಗೊಳ್ಳದೇ ಇರುವುದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಆರ್.ಎಂ.ಎಲ್. ನಗರದ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಿ ಸುಲಭವಾಗಿ ನೀರು ಹರಿಯುವಂತೆ ಮಾಡಬೇಕು. ಉದ್ದ ಮತ್ತು ಅಗಲವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬೇಕು.
ಚಾನಲ್‍ಗೆ ತಡೆಗೋಡೆ ನಿರ್ಮಿಸಬೇಕು. ವಾರ್ಡ್‍ನ ಕಾರ್ಪೋರೇಟರ್ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ಅಲ್ತಾಫ್ ಫರ್ವೇಜ್, ಹಫೀಜ್ ಶಫೀವುಲ್ಲಾ, ಸೈಯದ್ ನೂರುಲ್ಲಾ, ಮಾರುತಿ, ಅಲ್ಲಾಭಕ್ಷಿ, ಇಸ್ಮಾಯಿಲ್, ಮುಸ್ತಾಕ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.