ಶಿವಮೊಗ್ಗ: ನಾವು ಮಾಡುವ ವೃತ್ತಿಯಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಏಕಾಗ್ರತೆ ಅತ್ಯಂತ ಮುಖ್ಯ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಪ್ರಜ್ವಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಆಸ್ಪತ್ರೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಗೂ ನರ್ಸ್ಗಳಿಗೆ ಆಯೋಜಿಸಿದ್ದ ಕಾಯಕವೇ ಕೈಲಾಸ, ತಂಡ ರಚನೆ ಹಾಗೂ ಕಾಯಕ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಮಾಡುವ ಕೆಲಸ ಎಷ್ಟೇ ದೊಡ್ಡದಿರಲಿ ಅಥವಾ ಸಣ್ಣದಿರಲಿ, ಉತ್ತಮವಾಗಿ ಕೆಲಸ ಮಾಡಲು ಮುಂದಾಗಬೇಕು. ಕೆಲಸ ಮಾಡುವ ಕಚೇರಿ, ಸಂಸ್ಥೆ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವಾಗ ಎಷ್ಟು ಪರಿಣಾಮಕಾರಿಯಾಗಿ, ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತೆವೆ ಎನ್ನುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿ ಎಷ್ಟೇ ತಿಳಿದುಕೊಂಡರೂ ಇನ್ನೂ ಕಲಿಯುವುದು ಸಾಕಷ್ಟು ಇದ್ದೇ ಇರುತ್ತದೆ. ನಾವು ಮಾಡುವ ಕೆಲಸ ಕಾರ್ಯ ಪರಿಪೂರ್ಣ ಹಾಗೂ ಜನರ ಪ್ರೀತಿ ವಿಶ್ವಾಸ ಗಳಿಸಲು ಇಂತಹ ತರಬೇತಿ ಕಾರ್ಯಕ್ರಮಗಳು ಮಹತ್ತರ ಆಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆಯ ನಿರ್ದೇಶಕಿ ನಮಿತಾ ಧನಂಜಯ್ ಸರ್ಜಿ ಮಾತನಾಡಿ, ಜೆಸಿಐ ತರಬೇತಿ ಕಾರ್ಯಾಗಾರಗಳಿಂದ ಸಿಬ್ಬಂದಿಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರೋತ್ಸಾಹ ಸಿಗುತ್ತದೆ. ವೃತ್ತಿ ಕೌಶಲ್ಯ ಉತ್ತಮಗೊಳಿಸಲು ಪ್ರೇರಣೆ ಸಿಗುತ್ತದೆ. ಉತ್ತಮ ಕಾರ್ಯಶೈಲಿಯಿಂದ ಹಂತ ಹಂತವಾಗಿ ಉನ್ನತ ಹಂತಕ್ಕೆ ತಲುಪಬಹುದಾಗಿದೆ ಎಂದು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಸಮಾಜಮುಖಿಯಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದ ಮೂಲಕ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಕಾರ್ಯದರ್ಶಿ ಸಂತೋಷ್, ಅನೂಷ ಹಾಗೂ ಜೆಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.