ಶಿವಮೊಗ್ಗ: ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಮತ್ತು ನ್ಯಾಯಾಂಗವನ್ನು ಗೌರವಿಸಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಲಯ ಈಗಾಗಲೇ ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಪಾಲಿಸಬೇಕೆಂದು ಆದೇಶ ನೀಡಿದೆ.

ಕಾನೂನು ಗೌರವಿಸಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದರು.ಪಠ್ಯದಲ್ಲಿ ದೇಶ ಕಟ್ಟುವ ವಿಚಾರದ ಬಗ್ಗೆ ಪಠ್ಯಗಳನ್ನು ಸೇರಿಸಲಾಗಿದೆ. ಯಾವುದೇ ಪಠ್ಯವನ್ನು ತೆಗೆದಿಲ್ಲ. ದೇಶಕ್ಕೆ ಗೌರವ ಕೊಡುವುದರ ಬಗ್ಗೆ ಪಠ್ಯದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಅನವಶ್ಯಕ ಚರ್ಚೆ ಬೇಡ. ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ. ಇದರ ಪುನರಾವರ್ತನೆ ಬೇಡ ಎಂದರು.ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ, ಸಂಘಟನೆಯ ಪ್ರಮುಖರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ.

ವಿಜಯೇಂದ್ರರ ಜೊತೆಗೆ 20 ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗಿತ್ತು. ಎಲ್ಲರೂ ಆಕಾಂಕ್ಷಿಗಳೇ. ನಾಯಕತ್ವ ವಿಜಯೇಂದ್ರರಿಗೆ ಸೂಕ್ತ ಸ್ಥಾನ ಮಾನ ನೀಡುತ್ತದೆ. ಈಗಾಗಲೇ ಅವರು ಇದರ ಬಗ್ಗೆ ಸ್ಪಷ್ಠೀಕರಣ ನೀಡಿದ್ದಾರೆ ಎಂದರು.ರೈತಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ 35 ಕೋಟಿ ರೂ.ಗೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಯಾವುದೇ ವ್ಯಕ್ತಿಯಾಗಲಿ ತನ್ನ ಮೇಲೆ ಭರವಸೆ ಇಟ್ಟವರಿಗೆ ತನ್ನಿಂದ ನ್ಯಾಯ ನಿರೀಕ್ಷೆ ಮಾಡುತ್ತಿರುವವರಿಗೆ ಅನ್ಯಾಯ ಆಗದಂತೆ ವರ್ತಿಸಬೇಕಾಗುತ್ತದೆ. ನ್ಯಾಯ ಕೊಡುವ ವ್ಯಕ್ತಿಯಿಂದಲೇ ಅನ್ಯಾಯ ಆಗಬಾರದು. ಈ ಬಗ್ಗೆ ಅವರೇ ಸ್ಪಷ್ಠೀಕರಣ ನೀಡಲಿ ಎಂದರು.

ವರದಿ ಮಂಜುನಾಥ್ ಶೆಟ್ಟಿ…