ಶಿವಮೊಗ್ಗ: ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಸಂವರ್ಧಿಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ಮಾಡುತ್ತಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹೇಳಿದರು.

ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡಿನ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಾದ ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಸಾಹಿತ್ಯ, ಲಲಿತ ಕಲೆ, ಶಿಲ್ಪ ಕಲೆ, ಕೊಡವ ಸಾಹಿತ್ಯ, ಕೊಂಕಣಿ ಸಾಹಿತ್ಯ, ಬ್ಯಾರಿ ಸಾಹಿತ್ಯ, ತುಳು ಸಾಹಿತ್ಯ ಮತ್ತು ಅರೆಭಾಷೆ ಸಾಹಿತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಕಷ್ಟದ ಪರಿಸ್ಥಿತಿಯಲ್ಲಿ ಇರುವ ಹಿರಿಯ ಸಾಹಿತಿ ಮತ್ತು ಕಲಾವಿದರಿಗೆ ಜೀವಿತಾವಧಿವರೆಗೆ ಇಲಾಖೆಯು ಮಾಸಾಶನ ನೀಡುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 193 ಸಾಹಿತಿ-ಕಲಾವಿದರು ಮಾಸಾಶನ ಎರಡು ಸಾವಿರ ರೂ.ಗಳನ್ನು ಪಡೆಯುತ್ತಿದ್ದಾರೆ. ಹಿರಿಯ ಕಲಾವಿದರು ಹಾಗೂ ಇತರೆ ಕಲಾವಿದರು ಶಿವಮೊಗ್ಗ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಲ್ಲದಿದ್ದರೆ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಿವರಗಳನ್ನು ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ಮಾಸಾಶನ ಪಡೆಯುತ್ತಿದ್ದ ಸಾಹಿತಿ/ಕಲಾವಿದರು ಮೃತಪಟ್ಟಲ್ಲಿ ಅವರ ಪತ್ನಿಯರಿಗೆ ವಿಧವಾ ಮಾಸಾಶನ ನೀಡಲಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಜಿಲ್ಲಾ ಮಟ್ಟದಲ್ಲಿ, ವಿಭಾಗ ಮಟ್ಟದಲ್ಲಿ ಕಚೇರಿಗಳನ್ನು ಹೊಂದಿದೆ. ಗ್ರಾಮ ಮಟ್ಟದಿಂದ ರಾಜಧಾನಿ ಮಟ್ಟದವರೆಗೆ ಚಟುವಟಿಕೆಗಳನ್ನು ನಡೆಸುತ್ತಲಿದೆ.

ಆಡಳಿತ ಭಾಷೆಯಾಗಿ ಕನ್ನಡವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸುವ, ಸಂವರ್ಧಿಸುವ ಕಾರ್ಯವನ್ನು ಇಲಾಖೆಯು ನಡೆಸುತ್ತಿದೆ. ಅಂತರಾಷ್ಟಿçÃಯ ರೋಟರಿ ಸಂಸ್ಥೆ ಯಾವುದೇ ಸಾಂಸ್ಕೃತಿಕ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮಾಹಿತಿ ನೀಡಿದರೆ ಇಲಾಖೆಯ ಸಹಕಾರ ಇರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ಕಲಾವಿದರಿಗೆ ಸಹಕಾರ ಸಿಗುತ್ತಿದೆ. ಇದರ ಸದುಪಯೋಗವನ್ನು ಎಲ್ಲ ಕಲಾವಿದರು ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವದ ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ ಕೆ, ಸಮುದಾಯ ಸೇವೆಗಳ ನಿರ್ದೇಶಕ ವಿಜಯ್ ಕುಮಾರ್ ಜಿ, ವಸಂತ್ ಹೋಬಳಿದಾರ್, ಗಣೇಶ ಎಸ್, ಶ್ರೀಕಾಂತ್, ಮುಕುಂದ ಗೌಡ, ಸುಮತಿ ಜಿ, ಬಿಂದು ವಿಜಯ್‌ಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…