ಶಿವಮೊಗ್ಗ: ಶತಮಾನಗಳ ಕಾಲ ಶೋಷಿತರಾಗಿಯೇ ಉಳಿದಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಇತಿಹಾಸ ಕ್ಷಮೆ ಕೇಳಬೇಕು ಎಂದು ಸೊರಬ ತಾಲೂಕು ಜಡೆ ಸಂಸ್ಥಾನ ಮಠದ ಡಾ. ಮಹಾಂತಾ ಮಾಹಾಸ್ವಾಮಿ ಹೇಳಿದರು.

ಅವರು ಇಂದು ಬೆಂಗಳೂರಿನ ಅನೇಕ ಸಂಸ್ಥೆ, ಶಿವಮೊಗ್ಗ ರಕ್ಷಾ ಸಮುದಾಯ ಸಂಘಟನೆ, ಆಷ್ಟ್ರಯ ಸಂಸ್ಥೆಯ ಸಹಕಾರದೊಂದಿಗೆ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಧರ್ಮ ಮತ್ತು ಲಿಂಗತ್ವ/ಲೈಂಗಿಕತೆ ಸೇರ್ಪಡೆಯತ್ತ ಒಂದು ಸಂವಾದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಮನುಷ್ಯನ ಬದುಕಿಗೆ ಭಗವಂತ ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಎಲ್ಲರಲ್ಲೂ ಆತ್ಮವಿರುತ್ತದೆ. ಆದರೆ, ಪರಮಾತ್ಮನ ಇಷ್ಛೆಯಂತೆ ನಡೆದುಕೊಳ್ಳುವುದಿಲ್ಲ. ಮನುಷ್ಯ ಮನುಷ್ಯರ ನಡುವೆ ಬೇಧ ಭಾವ ಉಂಟಾಗುತ್ತಿದೆ. ಅದರಲ್ಲೂ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ಕೀಳರಿಮೆಯಿಂದ ಕಾಣುತ್ತಿದೆ. ಅವರಿಗೂ ಆತ್ಮಗಳು ಇವೆ ಎಂದು ತಿಳಿದುಕೊಳ್ಳುತ್ತಿಲ್ಲ. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ಇತಿಹಾಸದುದ್ದಕ್ಕೂ ಈ ಲೈಂಗಿಕ ಅಲ್ಪಸಂಖ್ಯಾತರು ನೋವು, ಶೋಷಣೆ ಅನುಭವಿಸುತ್ತಾ ಬಂದಿದ್ದಾರೆ. ಈಗ ಅವರೆಲ್ಲಾ ಸಂಘಟನೆಯಾಗಬೇಕಾದ ಕಾಲ ಬಂದಿದೆ. ಸರ್ಕಾರ ಸೌಲಭ್ಯಗಳನ್ನು ಪಡೆಯಬೇಕು. ಮಠ, ಮಂದಿರ, ಚರ್ಚ್, ಮಸೀದಿಯ ಎಲ್ಲಾ ಗುರುಗಳು ಅವರ ಪರವಾಗಿ ನಿಂತಿದ್ದಾರೆ. ನಿಲ್ಲುತ್ತಿದ್ದಾರೆ. ನಾವೆಲ್ಲರೂ ನಿಮ್ಮ ನೋವುಗಳಿಗೆ ಸ್ಪಂದಿಸುತ್ತೇವೆ. ನಿಮ್ಮ ಅವಮಾನಗಳು ನಮ್ಮದೇ ಎಂದು ತಿಳಿದುಕೊಳ್ಳುತ್ತೇವೆ. ನೀವೆಲ್ಲಾ ಒಟ್ಟಾಗಿ ಈ ಕಾರ್ಯಕ್ರಮದ ಹಿಂದೆ ಇರುವ ಎಲ್ಲಾ ಶಕ್ತಿಗಳನ್ನು ನಾನು ಗೌರವಿಸುವೆ ಎಂದರು.ಸೇಕ್ರೆಡ್ ಹಾರ್ಟ್ ಚರ್ಚ್ ನ ಫಾ. ಲಾರೆನ್ಸ್ ಡಿಸೋಜ ಮಾತನಾಡಿ, ನಮ್ಮಲ್ಲಿ ಮಠ, ಮಂದಿರ, ಮಸೀದಿ, ಚರ್ಚ್ ಗಳೂ ಇವೆ. ಆದರೆ ಅಲ್ಲಿ ಮನುಷ್ಯರಿಲ್ಲ. ಮನುಷ್ಯರನ್ನು ಹುಡುಕಬೇಕಾದ ಕಾಲವಿದು. ಲೈಂಗಿಕತೆ ಎನ್ನುವುದು ವೈಯಕ್ತಿಕ ವಿಷಯವಾಗಿದೆ. ಅದನ್ನು ಹೊರತುಪಡಿಸಿದರೆ ಲೈಂಗಿಕ ಅಲ್ಪಸಂಖ್ಯಾತರೆಲ್ಲರೂ ನಮ್ಮವರೇ ಎಂದರು.

ವಿಶೇಷವಾಗಿ ಅವರು ದೇವರ ಮಕ್ಕಳು. ದೇವರಲ್ಲಿ ಗಂಡು ಹೆಣ್ಣಿನ ಬೇಧ ಇರುವುದಿಲ್ಲ. ಮನುಷ್ಯನ ಆಲೋಚನೆಗಳು ಬದಲಾಗಬೇಕಾಗಿದೆ. ನಾವುಮ ನೀವು ಎಲ್ಲರೂ ಸಹೋದರರೆಂಬ ಭಾವನೆ ಬೆಳೆಯಬೇಕು ಎಂದರು.ಆಲ್ ಹಿದಿಯಾ ಮಸೀದಿಯ ಮೌಲಾನಾ ಶಾಹುಲ್ ಹಮೀದ್ ಇಮಾಮ್ ಮಾತನಾಡಿ, ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರು. ಲಿಂಗಬೇಧ ಸಲ್ಲದು. ಎಲ್ಲಾ ನ್ಯಾಯಾಲಯಗಳು ಪ್ರಸ್ತುತ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿವೆ. ಇಸ್ಲಾಂ ಧರ್ಮವೂ ಕೂಡ ನಾವೆಲ್ಲಾ ಸಹೋದರರು ಎಂಬ ತತ್ವ ಸಾರುತ್ತದೆ. ಲೈಂಗಿಕ ಅಸಮಾನತೆ ಸಲ್ಲದು. ಅವರಿಗೂ ಬದುಕುವ ಹಕ್ಕಿದೆ. ಅವರು ಮುಖ್ಯವಾಹಿನಿಗೆ ಬರಬೇಕು. ಬಸವಣ್ಣನವರು ಹೇಳಿದಂತೆ ದಯವೇ ಧರ್ಮದ ಮೂಲ. ನಮ್ಮ ಸಹೋದರ, ಸಹೋದರಿಯರು ತಮ್ಮ ಇರುವಿಕೆಗೆ ಭಯಪಡದೇ ಸರ್ಕಾರದ ಸೌಲಭ್ಯಗಳನ್ನು ಕೇಳಿ ಪಡೆಯಬೇಕು ಎಂದರು.ವಕೀಲ ಕೆ.ಪಿ. ಶ್ರೀಪಾಲ್ ಮಾತನಾಡಿ, ತೃತೀಯ ಲಿಂಗಿಗಳಿಗೂ ಕೂಡ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು. ಮುಖ್ಯವಾಗಿ ಅವರು ಶಿಕ್ಷಣ ಪಡೆಯಬೇಕು. ಕೀಳರಿಮೆ ಬಿಡಬೇಕು. ಧರ್ಮದ ದೃಷ್ಠಿಯಿಂದ ಅವರನ್ನು ಕೇವಲವಾಗಿ ನೋಡಬಾರದು.

ಧರ್ಮ ಮತ್ತು ಲಿಂಗತ್ವ ಇಂದು ಬಹುಮುಖ್ಯವಾಗಿ ಚರ್ಚೆಯ ವಿಷಯವಾಗಿದೆ. ಅವರ ಜೊತೆ ಸಂಘ ಸಂಸ್ಥೆಗಳು, ಸರ್ಕಾರ ಇರಬೇಕು. ಜೊತೆಯಾಗಿ ಕರೆದುಕೊಂಡು ಹೋಗುವ ಮುಖ್ಯವಾಹಿನಿಗೆ ತರುವ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದರು.ಜಯಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ನಾಜೀಮಾ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರ ಮಾಸಾಶನ ನೀಡಬೇಕು. ಅವರೂ ನಮ್ಮಂತೆ ಮನುಷ್ಯರು ಎಂಬ ಅಂತಃಕರಣ ಬೆಳೆಸಿಕೊಳ್ಳಬೇಕು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಅವರಿಗೆ ಇಂದು ನಮ್ಮ ಸಂಸ್ಥೆ ವತಿಯಿಂದ ಫಿನಾಯಿಲ್ ಹಾಗೂ ಮೇಣದಬತ್ತಿ ಹೇಗೆ ತಯಾರಿಸಬೇಕೆಂದು ಹೇಳಿಕೊಡುತ್ತೇವೆ ಎಂದರು.

ಅನೇಕ ಸಂಸ್ಥೆಯ ಸಂಚಾಲಕ ಮಲ್ಲು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 400 -500 ತೃತೀಯ ಲಿಂಗಿಗಳಿದ್ದಾರೆ. ಆದರೆ, ಸರಿಯಾದ ಅಂಕಿ ಅಂಶವೇ ಸಿಗುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ನಮ್ಮ ಸಮಾಜ ಯಾಕೆ ನಮ್ಮನ್ನು ಬಹಿಷ್ಕರಿಸುತ್ತೆ ಎಂದು ಗೊತ್ತಿಲ್ಲ. ನಮಗೂ ಶಿಕ್ಷಣ, ಉದ್ಯೋಗ ಬೇಕು. ಎಲ್ಲರಂತೆ ನಾವೂ ಸ್ವಾಭಿಮಾನದಿಂದ ಬದುಕಬೇಕು. ಜೋಗಪ್ಪ, ಹಿಜಡಾ, ಮಂಗಳಮುಖಿ ಹೀಗೆ ವಿವಿಧ ಹೆಸರುಗಳಿಂದ ಕರೆಯುವುದು ನಮಗೆ ಇಷ್ಟವಿಲ್ಲ. ನಾವೂ ದೇವರ ಪೂಜೆ ಮಾಡಲು ಅರ್ಹರಿದ್ದೇವೆ. ದೌರ್ಜನ್ಯ ಇನ್ನು ನಿಲ್ಲಲಿ. ಸರ್ಕಾರ ನಮ್ಮತ್ತ ಗಮನಿಸಲಿ ಎಂದರು.ಕಾರ್ಯಕ್ರಮದಲ್ಲಿ ರಕ್ಷಾ ಸಮುದಾಯದ ಅಧ್ಯಕ್ಷ ಮೊಹಮ್ಮದ್ ಸೈಫುಲ್ಲಾ, ಕೆ. ಪಿ.ಶ್ರೀಪಾಲ್ , ಸನ್ಮತಿ ಸಂಸ್ಥೆ ಪ್ರೇಮಾ ಶೆಟ್ಟಿ, ನಾಜಿಮಾ , ಹಿದಯತ್ ಮುಂತಾದವರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…