ಶಿವಮೊಗ್ಗ: ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಸಾವಿರಾರು ಗಣ್ಯ ವ್ಯಕ್ತಿಗಳು ಆರ್.ಎಸ್.ಎಸ್. ಮೂಲದಿಂದ ಬಂದವರು. ಆರ್.ಎಸ್.ಎಸ್. ಚಡ್ಡಿ ಪ್ರಭಾವ ಸಿದ್ಧರಾಮಯ್ಯನಿಗೆ ಏನು ಗೊತ್ತು? ಇಡೀ ವಿಶ್ವದಲ್ಲಿ ಅಣ್ಣ ತಮ್ಮ ಭಾವನೆ ಮೂಡಿಸಿದವರೇ ಆರ್.ಎಸ್.ಎಸ್.ನವರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ಚಡ್ಡಿಯ ಬಗ್ಗೆ ವಿಪಕ್ಷನಾಯಕ ಸಿದ್ಧರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚಡ್ಡಿಯ ಸಹವಾಸಕ್ಕೆ ಬಂದರೆ ಕಾಂಗ್ರೆಸ್ ಸುಟ್ಟು ಹೋಗುವುದು ಗ್ಯಾರಂಟಿ. ಚಡ್ಡಿಗೆ ಬೆಂಕಿ ಹಚ್ಚಿ ನೋಡಿ ಹನುಮಂತ ಲಂಕೆ ಸುಟ್ಟ ಹಾಗೆ ನಿಮ್ಮ ಪಕ್ಷದ ಬುಡವೇ ಸುಟ್ಟು ಬೂದಿಯಾಗುವುದು ಖಂಡಿತ ಎಂದರು.ನಿಮ್ಮ ಈ ಪ್ರಚಾರದ ಹುಚ್ಚಾಟಕ್ಕೆ ಎಲ್ಲೂ ಔಷಧಿ ಇಲ್ಲ. ಹುಚ್ಚ ಸಿದ್ಧರಾಮಯ್ಯನವೇ ನಿಮ್ಮ ಈ ಹುಚ್ಚುಚ್ಚು ಹೇಳಿಕೆಗಳನ್ನು ನಿಲ್ಲಿಸಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.ಚಡ್ಡಿ ನಿಷೇಧ ಮಾಡಲು ಹೊರಟ ಇಂದಿರಾಗಾಂಧಿ ಪ್ರಧಾನ ಮಂತ್ರಿ ಪದವಿ ಕಳೆದುಕೊಂಡರು. ರಾಹುಲ್ ಗಾಂಧಿ ಸೋಲುವ ಆತಂಕದಿಂದ ಉತ್ತರ ಪ್ರದೇಶ ಬಿಟ್ಟು ಮುಸ್ಲಿಂ ಬಾಹುಳ್ಯವಿರುವ ಕೇರಳದಿಂದ ಗೆದ್ದು ಬಂದರು. ಆರ್.ಎಸ್.ಎಸ್. ಚಡ್ಡಿ ಸುದ್ದಿಗೆ ಬಂದರೆ ಹುಷಾರ್. ಆರ್.ಎಸ್.ಎಸ್. ಎಂದರೆ ದೇಶ ರಕ್ಷಣೆ ಮಾಡುವವರು.

ಈಗಾಗಲೇ ಜನ ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ನಿಮಗೆ ಸೋನಿಯಾಗಾಂಧಿ ಬುದ್ಧಿ ಹೇಳಲ್ಲ. ರಾಹುಲ್ ಗಾಂಧಿಗೆ ಬುದ್ದಿ ಇಲ್ಲ. ಖರ್ಗೆ ಮಾತು ನೀವು ಕೇಳಲ್ಲ. ಆದ್ದರಿಂದ ನಿಮ್ಮ ಹುಚ್ಚುತನ ಕೇಳುವವರಿಲ್ಲ. ನೀವು ಎಲ್ಲಿ ನಿಂತರೂ ಈ ಚಡ್ಡಿಯೇ ನಿಮ್ಮನ್ನು ಸೋಲಿಸುತ್ತದೆ. ಚಡ್ಡಿ ಬಗ್ಗೆ ಹಗುರವಾದ ಮಾತು ಬಳಸಿದರೇ ನಾಯಿಗೂ ಕೂಡ ನಿಮಗೆ ಗೌರವಿಸಬೇಕು ಅನಿಸುವುದಿಲ್ಲ. ವಿಪಕ್ಷ ಸ್ಥಾನ ಉಳಿಸಿಕೊಳ್ಳುವ ಯೋಗ್ಯತೆಯೂ ಇಲ್ಲದ ನಿಮಗೆ ನಿಮ್ಮ ಪಕ್ಷದ ಶಾಸಕರೇ ಕಾಂಗ್ರೆಸ್ ಪಕ್ಷವನ್ನು ಮುಳುಗಿಸಿದವರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಿಂದೂ ಪ್ರೇಮಿ ಹರ್ಷ ಮೃತಪಟ್ಟಾಗ ಅವರ ಕುಟುಂಬದವರೊಂದಿಗೆ ಶವಯಾತ್ರೆಯಲ್ಲಿ ಪಾಲ್ಗೊಂಡಿರುವುದು ನಿಜ. ಹೊರಗಿನ ಕಿಡಿಗೇಡಿಗಳು ಹಿಂದೂ ಮುಸ್ಲಿಮರೆನ್ನದೇ ಕಲ್ಲು ತೂರಾಟ ನಡೆಸುತ್ತಿರುವಾಗ ಅವರಿಗೆ ತಡೆಯೊಡ್ಡಿದ್ದೇನೆ. ಆದರೆ, ಅದನ್ನೇ ಸೆಕ್ಷನ್ ಉಲ್ಲಂಘನೆ ಎಂದು ಸುಳ್ಳು ಪ್ರಚಾರ ಮಾಡಿ ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ.

ಹಿಜಾಬ್ ವಿರುದ್ಧ ಕೋರ್ಟ್ ತೀರ್ಮಾನ ಕೊಟ್ಟಾಗ ಕೋರ್ಟ್ ತೀರ್ಪನ್ನೇ ಧಿಕ್ಕರಿಸಿದ ವ್ಯಕ್ತಿಗಳಿಗೆ ಬೆಂಬಲ ನೀಡಿದವರು ನೀವು. ಆರ್.ಎಸ್.ಎಸ್. ಶಕ್ತಿಶಾಲಿಯಾಗುತ್ತಿರುವುದನ್ನು ಕಂಡು ಸೋಲುವ ಭಯದಿಂದ ಬಾಯಿಗೆ ಬಂದ ಹಾಗೆ ಬೈಯುವ ಕೆಟ್ಟ ಚಾಳಿಯನ್ನು ರೂಢಿಸಿಕೊಂಡಿದ್ದೀರಿ. ಸ್ವಾತಂತ್ರ್ಯ ಬಂದು 75 ವರ್ಷ ಆದರು ಕಾಂಗ್ರೆಸ್ ಕೈಯಲ್ಲಿ ರಾಮಮಂದಿರ ಕಟ್ಟಲಾಗಲಿಲ್ಲ. ತ್ರಿವಳಿ ತಲಾಖ್ ತರಲಿಲ್ಲ. 370 ಆರ್ಟಿಕಲ್ ರದ್ದುಪಡಿಸಿಲ್ಲ. ಮಸೀದಿಯೊಳಗಿರುವ ಹಿಂದೂಗಳ ದೇವಾಲಯಗಳನ್ನು ಹೊರತರಲು ಆಗಲಿ್ಲ್ಲ. ಆರ್.ಎಸ್.ಎಸ್. ಸುದ್ದಿಗೆ ಬಂದರೆ ಲಂಕೆ ಸುಟ್ಟ ಹನುಮಂತನ ರೀತಿ ಕಾಂಗ್ರೆಸ್ ಸುಟ್ಟು ಹೋಗುತ್ತದೆ ಎಂದರು.ನಾವೆಂದೂ ರಾಷ್ಟ್ರಧ್ವಜ ಅವಮಾನಿಸಿಲ್ಲ. ಮಂತ್ರಿ ಮನೆ ಮುಂದೆ ಚಡ್ಡಿ ಸುಟ್ಟರೆ ಸಂವಿಧಾನಕ್ಕೆ ಗೌರವ ಬರುತ್ತಾ? ನಿಮ್ಮ ಯುವಕರ ಗೂಂಡಾಗಿರಿ ಸಂಸ್ಕೃತಿಯನ್ನು ತಡೆಯಲು ನಿಮ್ಮ ಕೈಯಲ್ಲಿ ಆಗುವುದಿಲ್ಲ. ಆದರೆ, ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಗೂಂಡಾಗಿರಿಗೆ ತಕ್ಕ ಪಾಠ ಕಲಿಸುತ್ತೇವೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧಪಕ್ಷವಾಗಿಯೂ ಉಳಿಯಲ್ಲ ಎಂದರು.ಮೇಯರ್, ಉಪಮೇಯರ್, ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ನಗರ ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ನಿರಂತರ ನೀರು ಪೂರೈಕೆಗೆ ಬೇಕಾದ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ಮಂಡ್ಲಿಯಲ್ಲಿ ನೆರೆಹಾನಿಗೊಳಗಾದವರಿಗೆ 57 ಮನೆಗಳನ್ನು ನಿರ್ಮಿಸಿದ್ದು, ಮುಂದಿನ ತಿಂಗಳೊಳಗೆ ಹಸ್ತಾಂತರ ಮಾಡಲಿದ್ದೇವೆ. ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. 24*7 ನೀರು ಸರಬರಾಕಜು ಮಾಡಲು ಮತ್ತು ಯುಜಿಡಿ ಕಾಮಗಾರಿಗೆ ವೇಗ ನೀಡಲಾಗಿದೆ. ನಾಗರಿಕ ಸಮಿತಿಯೊಂದಿಗೆ ಚರ್ಚಿಸಿ ನೀರಿನ ದರವನ್ನು 120 ರೂ.ನಿಂದ 175 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು. ಕೆಂಪು ನೀರು ಪೂರೈಕೆಯಾಗುತ್ತಿರುವ ದೂರುಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ತುರ್ತಾಗಿ ಇಬ್ಬರು ಕೆಮಿಸ್ಟ್ ಗಳು ಬೇಕೆಂದು ಬೇಡಿಕೆ ಇಡಲಾಗಿದ್ದು, ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಶುದ್ಧ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನ ಗೆಲ್ಲುವುದು ನಿಶ್ಚಿತ ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಒಟ್ಟಾಗಿ ಬಿಜೆಪಿ ಸೋಲಿಸುವುದೇ ಗುರಿ ಎಂದು ಎಷ್ಟೇ ಪ್ರಯತ್ನಪಟ್ಟರೂ ಬಿಜೆಪಿಯನ್ನು ಸೋಲಿಸಲಾಗುವುದಿಲ್ಲ ಎಂದರು.ಕಾಶ್ಮೀರಿ ಪಂಡಿತರ ಹತ್ಯೆಗಳು ಮತ್ತು ಅವರ ವಲಸೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪಾಕಿಸ್ತಾನ ಗಡಿಭಾಗದಲ್ಲಿ ಹಿಂದಿನಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಿದೆ. ಪಾಕಿಸ್ತಾನಕ್ಕೆ ಈಗಾಗಲೇ ಹಲ್ಲು ಕಿತ್ತಿದ್ದೇವೆ. ಮತ್ತೆ ಬಾಲ ಬಿಚ್ಚಲು ಹೊರಟಿದೆ. ಕೇಂದ್ರ ಸರ್ಕಾರ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದರು. ಈ ಸಂಬಂಧ ಓವೈಸಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಓವೈಸಿ ಒಬ್ಬ ರಾಷ್ಟ್ರದ್ರೋಹಿ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ರಾಷ್ಟ್ರದ್ರೋಹಿಗಳಿಗೆ ಬಿಜೆಪಿ ಸರ್ಕಾರ ಸೂಕ್ತ ಉತ್ತರ ನೀಡಲಿ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ನಾಗರಾಜ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಚನ್ನಬಸಪ್ಪ, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…