ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಚಾರ್ಯ ಡಾ. ಸಿ.ವಿ ರುದ್ರಾರಾಧ್ಯರ ನೇತೃತ್ವದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ವಿಶೇಷ ಉಚಿತ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಶಿಬಿರದಲ್ಲಿ ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ರವರು ಪಾಲ್ಗೊಂಡು ಮಾತನಾಡಿದರು.

ಕ್ರಮಬದ್ಧ ಯೋಗಾಭ್ಯಾಸವು ಅನೇಕ ಪ್ರಯೋಜನಗಳನ್ನು ಹೊಂದಿದೆ. ನಿಯತ ಯೋಗ ಅಭ್ಯಾಸದಿಂದ ಸುಖಕರ ನಿದ್ರೆ, ಹೆಚ್ಚಿನ ದೇಹಶಕ್ತಿ ಮತ್ತು ರಕ್ತ ಚಲನೆ, ಉತ್ತಮ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ, ಸ್ನಾಯುಸೆಳೆತಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೇ, ಆರೋಗ್ಯಕರ ಹೃದಯ, ನಿಯಂತ್ರಿತ ರಕ್ತದೊತ್ತಡ ಹಾಗೂ ಸಮಾನ ಮನಸ್ಥಿತಿ ಸಹ ನಮ್ಮದಾಗುತ್ತದೆ. ದೇಹ ಮತ್ತು ಮನಸ್ಸಿನ ಸರ್ವತೋಮುಖ ಆರೋಗ್ಯದಿಂದಾಗಿ ನಾವು ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ.

ಈಗಾಗಲೇ ಯೋಗ ಶಾಸ್ತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಅಥವಾ ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದು ರುಜುವಾತಾಗಿದೆ. ಇಂದಿನ ಕಾಲಘಟ್ಟದಲ್ಲಿ ಮನುಷ್ಯರ ಜೀವಕ್ಕೆ ಸಂಚಕಾರ ತರುತ್ತಿರುವ ವ್ಯಾಧಿಗಳಲ್ಲಿ ಮುಖ್ಯವಾದ ರಕ್ತದೊತ್ತಡ, ನಿದ್ರಾಹೀನತೆ, ಬಿರುಸುತನ, ಹೃದಯ ಸ್ತಂಭನ, ಮಾನಸಿಕ ಉದ್ವೇಗ, ಮಾನಸಿಕ ಅಸ್ಥಿರತೆ ಮುಂತಾದವುಗಳಿಂದ ಮುಕ್ತಿ ಪಡೆದು, ಆರೋಗ್ಯವಂತ ಹಾಗೂ ಸುಖಕರ ಜೀವನ ಸಾಗಿಸಲು ನಾವೆಲ್ಲರೂ ಶಿಸ್ತಿನ ಯೋಗಾಭ್ಯಾಸ ನಡೆಸೋಣ ಎಂದು ತಿಳಿಸಿದರು.

ದೈನಂದಿನ ಜೀವನದಲ್ಲಿ ಯೋಗದ ಮಹತ್ವ ಬಹಳ ಇದೆ. ಯೋಗಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಒಳ್ಳೆಯ ಯೋಗ ಎಂದರೆ ಕೇವಲ ರೋಗದಿಂದ ದೂರವಿರುವುದು ಮಾತ್ರವಲ್ಲ ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವದು ಎಂದರ್ಥ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ನಾಗರಾಜ್ ಕಂಕಾರಿ, ರೋಟರಿ ವಿಜಯ್, ಕುಮಾರ್, ರಂಗನಾಥ, ಜಗದೀಶ್, ಗಿರೀಶ್, ಕೇಶವ, ಹರೀಶ್, ಬಸವರಾಜ್ ಹಾಗೂ ಇತರರು ಉಪಸ್ಥಿತರಿದ್ದರು .

ವರದಿ ಮಂಜುನಾಥ್ ಶೆಟ್ಟಿ…