ಶಿವಮೊಗ್ಗ: ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಪ್ರಥಮ ಭಾಷೆಯ ಬದಲು 2 ಮತ್ತು 3ನೇ ಭಾಷೆಯನ್ನಾಗಿ ಕನ್ನಡ ಕಲಿಸಲು ನಿಯಮ ರೂಪಿಸಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಎಲ್ಲಾ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಬೇಕೆಂದು ಈ ವರೆಗೆ ಇದ್ದ ನಿಯಮಕ್ಕೆ ತಿದ್ದುಪಡಿ ತಂದು ಇನ್ನುಮುಂದೆ ದ್ವಿತೀಯ ಅಥವಾ ತೃತೀಯ ಭಾಷೆ ಕಲಿಸಬೇಕೆಂಬ ಕರಡು ನಿಯಮಾವಳಿ ರೂಪಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಈ ನಿಲುವು ಕನ್ನಡ ಭಾಷೆಗೆ ತೀವ್ರ ಹಿನ್ನೆಡೆ ಮಾಡಿದೆ. ಇದರಿಂದ ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಕಲಿಯುತ್ತಿರುವ ಮಕ್ಕಳ ಭವಿಷ್ಯ ಹಾಳುಮಾಡುವುದಲ್ಲದೆ, ಆ ಶಾಲೆಗಳ ಮೇಲಿನ ಸರ್ಕಾರಿ ನಿಯಂತ್ರಣ ಕೈತಪ್ಪಲು ಸರ್ಕಾರವೇ ದಾರಿ ಮಾಡಿಕೊಟ್ಟಿದೆ.

ಇದುವರೆಗೆ ಕನ್ನಡವನ್ನು ಪ್ರಥಮ ಹಾಗೂ ದ್ವಿತೀಯ ಭಾಷೆಯಾಗಿ ಕಲಿಸಬೇಕೆಂಬ ನಿಯಮ ಇತ್ತು. ಬಹುತೇಕ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಪ್ರಥಮ ಭಾಷೆಯನ್ನಾಗಿ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಕಲಿಸಬೇಕೆಂಬ ನಿಯಮ ರೂಪಿಸಲಾಗಿದೆ. ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತಿದ್ದು, ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.
ಕನ್ನಡಕ್ಕೆ ಧಕ್ಕೆ ಬರದಂತೆ ಶಿಕ್ಷಣ ನೀತಿಯನ್ನು ಅನುಮೋದನೆ ಮಾಡಬೇಕೆಂದು ಸಂಘಟನೆ ಆಗ್ರಹಿಸಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಧುಸೂದನ್ , ಕಾರ್ಯಾಧ್ಯಕ್ಷ ರಘುನಂದನ್ ಪ್ರಮುಖರಾದ ರವಿಪ್ರಸಾದ್, ನಯಾಜ್, ನೂರುಲ್ಲಾ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…