
ಶಿವಮೊಗ್ಗ: ಪ್ರತಿಯೊಬ್ಬರೂ ಶರೀರ ಮತ್ತು ಮಾನಸಿಕ ಸ್ವಾಸ್ತ್ಯ ಕಾಪಾಡಿಕೊಳ್ಳಲು ಪ್ರತಿ ನಿತ್ಯ ಯೋಗ ಅಭ್ಯಾಸ ರೂಢಿಸಿಕೊಳುವುದು ಅವಶ್ಯ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಎಂ.ವಿ.ವೈಶಾಲಿ ತಿಳಿಸಿದರು.

ಅವರು ಇಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು 8ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಒಂದು ದಿನದ ವಿಶ್ವವಿದ್ಯಾಲಯ ಮಟ್ಟದ ಯೋಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಯುವ ಜನತೆ ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚನ ಸಮಯ ಕಳಯುತ್ತಿದ್ದಾರೆ. ಆ ಕಾರಣಕ್ಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿರುವುದನ್ನು ಕಾಣಿತ್ತಿದ್ದೇವೆ. ಇದು ಅವರ ಭವಿಶ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತದೆ. 20ರಿಂದ 30ರ ವಯಸ್ಸಿನ ಅವಧಿ ಅತ್ಯಂತ ಪ್ರಮುಖವಾದದ್ದು. ಅನಾರೋಗ್ಯ ಬರದಂತೆ ನೋಡಿಕೊಳ್ಳಲು, ಅದರಿಂದ ಪಾರಾಗಲು ಯೋಗಾಭ್ಯಾಸ ಅನಿಯಾರ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿವಗಂಗಾ ಯೋಗ ಕೇಂದ್ರದ ಯೋಗ ಗುರುಗಳಾದ ರುದ್ರಾರಾಧ್ಯ ಮಾತನಾಡಿ ಯುವಕರು ಹೊರಗಿನ ಪ್ರಪಂಚಕ್ಕೆ ಮಾರುಹೋಗದೇ ತಮ್ಮ ಒಳ ಮನಸ್ಸಿನ ಪರಿಶುದ್ಧತೆಗೆ ಗಮನ ನೀಡಬೇಕು. ಉತ್ತಮ ಜೀವನ ಶೈಲಿಯತ್ತ ತಮ್ಮ ಚಿತ್ತ ಹರಿಸಬೇಕು. ಅದಕ್ಕೆ ಯೋಗಾಭ್ಯಾಸವೊಂದೇ ದಾರಿ ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ, ಡಿವಿಎಸ್ ಕಾಲೇಜಿನ ಡಾ.ಕೆ.ಜಿ.ವೆಂಕಟೇಶ, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ. ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್ ಉಪಸ್ಥಿತರಿದ್ದರು. ಎನ್.ಎಸ್.ಎಸ್.ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಸ್ವಾಗತಿಸಿದರು. ಕಮಲಾ ನೆಹರು ಕಾಲೇಜಿನ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ ವಂದಿಸಿದರು. ಕು.ರಕ್ಷಿತಾ ಸಿ.ಡಿ. ನಿರ್ವಹಿಸಿದರು. ವಿವಿಧ ಕಾಲೇಜುಗಳ ಸುಮಾರು 150 ಸ್ವಯಂಸೇವಕಿಯರು ಶಿಬಿರದ ಪ್ರಯೋಜನ ಪಡೆದರು.