ಶಿವಮೊಗ್ಗ: ಕವಿ, ಕವನದ ಪರಿಚಯವಿಲ್ಲದೆ ಹಾಗೂ ಶ್ರದ್ಧೆ, ಭಕ್ತಿಯಿಂದ ಕೂಡಿದ, ನಿರಂತರ ಅಭ್ಯಾಸವಿಲ್ಲದ ಹಾಡುಗಾರಿಕೆಯಿಂದ ಸುಗಮ ಸಂಗೀತ ಕ್ಷೇತ್ರ ಸೊರಗುತ್ತಿದೆ ಎಂದು ಸುಗಮ ಸಂಗೀತ ಲೋಕದ ಸಾಮ್ರಾಜ್ಞಿ ಖ್ಯಾತಿಯ ಡಾ. ಎಚ್.ಆರ್.ಲೀಲಾವತಿ ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದಲ್ಲಿ “ಸ್ನೇಹ ಗಾನ ಗಾಯನ ತಂಡ” ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ “ಕರ್ನಾಟಕ ಸಂಘದ ತಿಂಗಳ ಅತಿಥಿ”ಯಾಗಿ ಮಾತನಾಡಿ, ಸುಗಮ ಸಂಗೀತ ಗಾಯಕರು ಸಾಹಿತ್ಯ ಪ್ರಿಯರಾಗಿರಲೇ ಬೇಕು. ಕವಿತೆಯ ಸಾಹಿತ್ಯ ಅರ್ಥವಾಗದೇ ಭಾವ ತುಂಬಿ ಹಾಡುವುದು ಅಸಾಧ್ಯ ಎಂಬ ಸತ್ಯವನ್ನು ಯುವ ಗಾಯಕರಿಗೆ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವ್ಯಕ್ತಿ ತಾನು ಆಸಕ್ತಿ ಹೊಂದಿರುವ ಕ್ಷೇತ್ರವನ್ನು ಆಯ್ಕೆ ಮಾಡಿ, ನಿರಂತರ ಅಧ್ಯಯನ, ಅಭ್ಯಾಸವನ್ನು ತಪಸ್ಸಿನೋಪಾದಿಯಲ್ಲಿ ನಡೆಸಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಪಾಶ್ಚಿಮಾತ್ಯ ಸಂಗೀತದ ಅಬ್ಬರದ ನಡುವೆಯೂ ಸುಗಮ ಸಂಗೀತ ಉಳಿಯಬೇಕಾದರೆ ಗಾಯಕರು ವೇದಿಕೆ ಪಡೆಯುವ ಮೋಹ ಕೈಬಿಟ್ಟು ಸಾಧನೆಯತ್ತ ಗುರಿಯಿಟ್ಟು, ಕಠಿಣ ಪರಿಶ್ರಮಿಗಳಾಗಬೇಕು ಎಂದರು.

ಕತ್ತಲೆಯಲ್ಲೂ ವಜ್ರ ಹೊಳೆಯುವಂತೆ ಸಾಧಕರು. ಯಾವ ಮೂಲೆಯಲ್ಲಿದ್ದರೂ ಬೆಳಕಿಗೆ ಬಂದೇ ಬರುವರೆಂಬ ವಿಶ್ವಾಸ ಇದೆ. ಪ್ರೀತಿಯೇ ಬದುಕು, ದ್ವೇಷವಿಲ್ಲದ ಮನಸ್ಸು ಸದಾ ಧನಾತ್ಮಕ ಚಿಂತನೆಯಲ್ಲಿ ತೊಡಗಿ ಸಾಧನೆಯ ಹಾದಿ ಸುಗಮ ಗೊಳಿಸುವುದು ಎಂದು ಹೇಳಿದರು.
“ಭಾವ ಗಾನ ಗಾಯನ ತಂಡ”ದ ಉಷಾ ನಾಗರಾಜ್ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಂಡದ ಸದಸ್ಯೆಯರಾದ ವಿನೋದ ಕೃಷ್ಣಮೂರ್ತಿ, ಜಯಲಕ್ಷಿö್ಮÃ ಚಂದ್ರಹಾಸ್, ಸ್ಥಳೀಯರಾದ ಭಾಗ್ಯ ರಮೇಶ್, ಅರುಂಧತಿ, ಶೃತಿ ಹಾಗೂ ನಮ್ಮ ಟಿವಿ ಚಾನೆಲ್ ನಿರೂಪಕ ಜಿ.ವಿಜಯಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…