ಶಿವಮೊಗ್ಗ: ಸೋಮಿನಕೊಪ್ಪದ ಮಸೀದಿ ರಸ್ತೆಯಲ್ಲಿ ಮೇ 19 ರಂದು ಸುರಿದ ಭಾರಿ ಮಳೆಗೆ ಇಂದ್ರಮ್ಮ ಕೃಷ್ಣೋಜಿರಾವ್ ಎಂಬ ವೃದ್ಧೆಯ ಮನೆಯ ಮೇಲೆ ತೆಂಗಿನಮರ ಬಿದ್ದು, ಮನೆ ಸಂಪೂರ್ಣ ಹಾನಿಗೀಡಾಗಿತ್ತು. ಸರ್ಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇನ್ನೊಂದು ಮಳೆಗಾಲ ಬಂದರೂ ಯಾವುದೇ ಪರಿಹಾರ ನೀಡಿಲ್ಲ. ಇದನ್ನು ತಿಳಿದ ಬಾರ್ಕೂರು ಸಂಸ್ಥಾನ ಪೀಠದ ಸಂತೋಷ್ ಗುರೂಜಿ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಇಂದ್ರಮ್ಮ ಅವರಿಗೆ ಸಾಂತ್ವನ ಹೇಳಿ, ಸುಸಜ್ಜಿತ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ಇಂದ್ರಮ್ಮ ಅವರ ಪತಿ 2008 ರಲ್ಲಿ ನಿಧನರಾಗಿದ್ದು, ನಾಲ್ವರು ಹೆಣ್ಣಮಕ್ಕಳು ಮದುವೆಯಾಗಿದ್ದಾರೆ. ದುಡಿಯುವ ಓರ್ವ ಪುತ್ರ ಇತ್ತೀಚೆಗೆ ನಿಧನರಾಗಿದ್ದಾರೆ. ಇಂದ್ರಮ್ಮ ಮತ್ತು ಅವರ ಮೊಮ್ಮಕ್ಕಳು ನಿರಾಶ್ರಿತರಾಗಿದ್ದಾರೆ. ಮತ್ತೊಬ್ಬ ಪುತ್ರ ಬೇರೆ ವಾಸವಾಗಿದ್ದಾರೆ. ಇವರ ಸಂಪೂರ್ಣ ವಿವರ ಪಡೆದ ಸಂತೋಷ್ ಗುರೂಜಿ ಅವರು ತಮ್ಮ ವಿದ್ವತ್ ಟ್ರಸ್ಟ್ ಮೂಲಕ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರದ ಪರಿಹಾರ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಇಂತಹ ಸಂದರ್ಭದಲ್ಲಿ ನಿರಾಶ್ರಿತರಿಗೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕು ಎನ್ನುವ ಜಾಗೃತಿ ಮೂಡಿಸುವ ಸಲುವಾಗಿ ನಾನು ಈ ಕಾರ್ಯಕ್ಕೆ ಕೈಜೋಡಿಸಿದ್ದೇನೆ.

ಶಿವಮೊಗ್ಗದಲ್ಲಿ ಅನೇಕ ದಾನಿಗಳಿದ್ದು, ಈ ಕುಟುಂಬಕ್ಕೆ ತಮ್ಮಿಂದಾದ ರೀತಿಯಲ್ಲಿ ಸಹಾಯ ಮಾಡಬಹುದು ಎಂದ ಅವರು, ಆಸಕ್ತಿ ಇರುವವರು ನಮ್ಮ ಟ್ರಸ್ಟ್ ಖಾತೆಗೆ ಹಣ ಸಂದಾಯ ಮಾಡುವಂತೆ ಅವರು ವಿನಂತಿಸಿದರು. ನೆರವು ನೀಡುವವರು ಬ್ಯಾಂಕ್ ಖಾತೆ ಸಂಖ್ಯೆ 9142500101670101 ಐ.ಎಸ್.ಎಸ್.ಸಿ. ಕೋಡ್ ಕೆ.ಎ.ಆರ್.ಬಿ. 0000914 ಕರ್ನಾಟಕ ಬ್ಯಾಂಕ್, ಹೆರೋಹಳ್ಳಿ ಶಾಖೆ, ಬೆಂಗಳೂರು ಇಲ್ಲಿಗೆ ಕಳಿಸಬೇಕೆಂದು ಕೋರಿದರು. ವಿಶೇಷ ಎಂದರೆ ಮೊದಲ ದೇಣಿಗೆಯಾಗಿ ಸ್ಥಳದಲ್ಲೇ ಇದ್ದ ಸೈಯದ್ ಖುದ್ದೂಸ್ ಎಂಬ ಮುಸ್ಲಿಂ ಬಾಂಧವರೊಬ್ಬರು 500 ರೂ. ನೀಡಿ ಸೌಹಾರ್ದತೆ ಮೆರೆದರು. ಅವರ ದೇಣಿಗೆ ಸ್ವೀಕರಿಸಿದ ಗುರೂಜಿ, ನಮ್ಮ ಭಾರತದ ಮಣ್ಣಿನ ಗುಣವಿದು. ಮುಸ್ಲಿಂ ಬಂಧುವೊಬ್ಬರ ಮಾನವೀಯತೆ ಮತ್ತು ಸೌಹಾರ್ದದ ಗುಣ ಆದರ್ಶಪ್ರಾಯವಾಗಿದೆ ಎಂದರು.

ನಿರ್ದೇಶಕಿ ಲೀನಾ ರವರು ಕಾಳಿ ಮಾತಿಗೆ ಸಿಗರೇಟ್ ನೀಡಿದ ಚಿತ್ರ ಖಂಡನೀಯ…

ನಿರ್ದೇಶಕಿ ಲೀನಾ ಅವರು ಕಾಳಿ ಮಾತೆಗೆ ಸಿಗರೇಟ್ ನೀಡಿ ಚಿತ್ರಿಸಿದ್ದನ್ನು ತೀವ್ರವಾಗಿ ಖಂಡಿಸಿದ ಸ್ವಾಮೀಜಿ, ಮಾದಕ ವಸ್ತುವನ್ನು ಸರ್ಕಾರವೇ ಬ್ಯಾನ್ ಮಾಡಿರುವಾಗ ಈ ನಿರ್ದೇಶಕಿ ದೇವರ ಬಾಯಲ್ಲಿ ಸಿಗರೇಟ್ ನೀಡಿ ಹಿಂದೂಗಳನ್ನು ಪ್ರಚೋದಿಸಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು. ಇದರ ದುರುಪಯೋಗಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ನಿರ್ದೇಶಕಿ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.ಮಾನವ ಗುರು ಚಂದ್ರಶೇಖರ ಗುರೂಜಿಯವರ ಕೊಲೆಗೆ ಸಂಬಂಧಿಸಿದಂತೆ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಸಂಸ್ಥೆಯಲ್ಲೇ ಕೆಲಸಕ್ಕಿದ್ದು, ನಂಬಿಕೆದ್ರೋಹ ಮಾಡಿದ್ದಾರೆ. ಆಸ್ತಿಗಾಗಿ ಕ್ರೂರವಾಗಿ ಕೊಂದಿದ್ದಾರೆ. ಇಂತಹ ಘಟನೆ ನಡೆಯದಂತೆ ಸರ್ಕಾರ ಸಮಾಜದ ಗುರುಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳಿದರು.

ವರದಿ ಮಂಜುನಾಥ್ ಶೆಟ್ಟಿ…