ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 15 ರಿಂದ 17 ರಷ್ಟು, ಶೇಕಡ 3 ರಿಂದ 7 ಕ್ಕೆ ಮೀಸಲಾತಿ ಹೆಚ್ಚಿಸಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಶೀಘ್ರವಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ಸ್ವಾಭಿಮಾನಿ ಎಸ್.ಸಿ. –ಎಸ್.ಟಿ. ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಬೆಂಗಳೂರು ಇವರ ವತಿಯಿಂದ ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಂತೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಭಾರತ ಸಂವಿಧಾನದ ಅನುಚ್ಛೇದ 341(2) ರಂತೆ ಹೊರಡಿಸಿರುವ ಅಧಿಸೂಚನೆಗಳಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳು ಮತ್ತು ಅನುಚ್ಛೇದ 342(2) ರಂತೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳನ್ನು ಗುರುತಿಸಲಾಗಿದ್ದು, ಶೈಕ್ಷಣಿಕ ಸಂಸ್ಥೆಗಳ ಪ್ರವೇಶಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳ ನೇಮಕಾತಿಗಳಲ್ಲಿ ಸೂಕ್ತ ಪ್ರಾತಿನಿಧ್ಯತೆ ನೀಡಲು ಮೀಸಲಾತಿ ಅವಕಾಶಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆ ಶೇಕಡ 25 ರಷ್ಟು ಇದ್ದು, ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ ಮೀಸಲಾತಿ ಪ್ರಮಾಣ ಹೆಚ್ಚಿಸಿಲ್ಲ. 1958 ರಲ್ಲಿ ನಿಗದಿ ಮಾಡಿದ ಮೀಸಲಾತಿ ಮುಂದುವರೆದಿದ್ದು, ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.ಇಂತಹ ಅನ್ಯಾಯ ಸರಿಪಡಿಸುವಂತೆ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಆಗ್ರಹಿಸಿದ್ದಾರೆ.
ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯಿಂದ ಬೆಂಗಳೂರುವರೆಗೆ 400 ಕಿಮೀ ಪಾದಯಾತ್ರೆ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ ಪರಿಣಾಮ ನಿವೃತ್ತ ನ್ಯಾ. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚನೆಯಾಗಿ ಜುಲೈ 2, 2020 ರಂದು ಆಯೋಗ ಮೀಸಲಾತಿ ಹೆಚ್ಚಳಕ್ಕೆ ವಿವರವಾದ ವರದಿ ಸಲ್ಲಿಸಿದೆ. ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ 15 ರಿಂದ 17 ಕ್ಕೆ, 3 ರಿಂದ 7 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ ಎಂದರು.ನಾಗಮೋಹನದಾಸ್ ಆಯೋಗ ವರದಿ ಸಲ್ಲಿಸಿ ಎರಡು ವರ್ಷಗಳಾದರೂ ಸರ್ಕಾರ ಇನ್ನೂ ವರದಿ ಜಾರಿಗೊಳಿಸಿಲ್ಲ. ವಾಲ್ಮೀಕಿ ಶ್ರೀಗಳು 152 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಸ್ವತಃ ಮುಖ್ಯಮಂತ್ರಿಗಳು ಮನವೊಲಿಸಿ ಸತ್ಯಾಗ್ರಹ ಮೊಟಕುಗೊಳಿಸಿದರು. ಆದರೂ, ಬೇಡಿಕೆ ಈಡೇರಿಸದ ಕಾರಣ ಮತ್ತೆ ಶ್ರೀಗಳು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೂ ನೀಡಿದ್ದ ಭರವಸೆಯಂತೆ ಬೇಡಿಕೆ ಈಡೇರಿಸಿಲ್ಲ ಎಂದರು.ಆದ್ದರಿಂದ ಶೀಘ್ರವಾಗಿ ಒಂದು ವಾರದೊಳಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ಒಂದು ವಾರದೊಳಗೆ 25 ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ಮೀಸಲಾತಿ ಹೆಚ್ಚಳ ಮಾಡದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ರವಿಕುಮಾರ್, ಎಂ. ಗುರುಮೂರ್ತಿ, ಹೆಚ್.ಟಿ. ಬಳಿಗಾರ್, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಆರ್. ಲಕ್ಷ್ಮಣ್, ತಾಲೂಕು ಅಧ್ಯಕ್ಷ ಹೆಚ್.ಆರ್. ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್. ಮೋಹನ್, ಡಿಎಸ್ಎಸ್ ನ ಹಾಲೇಶಪ್ಪ, ಹನುಮಂತನಾಯ್ಕ್, ಮೃತ್ಯುಂಜಯಪ್ಪ, ಲೋಕೇಶ್ ಕಲ್ಮನೆ, ಬಿ.ಎಸ್. ನಾಗರಾಜ್, ಹುಚ್ಚರಾಯಪ್ಪ, ಸತ್ಯ ಭದ್ರಾವತಿ, ಬಸವರಾಜ್ ಮೊದಲಾದವರಿದ್ದರು.