ಶಿವಮೊಗ್ಗ: ಸೋಮವಾರ ರಾತ್ರಿ ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯ ಮೊದಲನೇ ತಿರುವಿನಲ್ಲಿ ಯುವಕ ಕಾಂತರಾಜ್ ಮೇಲೆ ಅನ್ಯಕೋಮಿಗೆ ಸೇರಿದ ಯುವಕರು ಹಲ್ಲೆ ಮಾಡಿದ್ದು, ಇದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.ಈ ಹಿಂದೆ ಹತ್ಯೆಯಾದ ಹರ್ಷನ ಅಂತಿಮ ಸಂಸ್ಕಾರದ ಮೆರವಣಿಗೆ ಸಂದರ್ಭದಲ್ಲಿ ಚಿತಾಗಾರದ ಬಳಿ ರಾಜೀವ್ ಗಾಂಧಿ ಬಡಾವಣೆಯ ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದರು.

ಆ ಸಂದರ್ಭದಲ್ಲಿ ಹಿಂದೂ ಯುವಕ ಕಾಂತರಾಜ್ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.ನಿನ್ನೆ ಕಾಂತರಾಜ್ ತಮ್ಮ ಮನೆಯಿಂದ ಹೊರಬಂದು ಮೂತ್ರ ವಿಸರ್ಜನೆ ಮಾಡುವ ವೇಳೆ ಹಿಂಬದಿಯಿಂದ ಬಂದ ಅನ್ಯಕೋಮಿಗೆ ಸೇರಿದ ನಾಲ್ಕೈದು ಮಂದಿ ಮಚ್ಚು ಮತ್ತು ಬ್ಯಾಟ್ ನಿಂದ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ದಾಳಿಗೊಳಗಾದ ಕಾಂತರಾಜ್ ತಕ್ಷಣ ಅದೇ ಬ್ಯಾಟ್ ಕಸಿದುಕೊಂಡು ಹಲ್ಲೆಕೋರರಿಂದ ರಕ್ಷಿಸಿಕೊಂಡಿದ್ದು, ಆತನ ಕೂಗಾಟ ಕೇಳಿ ಅಕ್ಕಪಕ್ಕದವರು ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ದಾಳಿಗೊಳಗಾದ ಕಾಂತರಾಜ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು ಜಿಲ್ಲಾ ಬಿಜೆಪಿ ಮುಖಂಡರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ನಿರ್ಲಕ್ಷಿಸುವಂತಿಲ್ಲ. ಇದನ್ನು ಹಿಂದೂ ಸಮಾಜದ ದೌರ್ಬಲ್ಯ ಎಂದು ಭಾವಿಸಬೇಡಿ. ಈ ಬಗ್ಗೆ ತೀವ್ರವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ವಿಶೇಷವಾಗಿ ಗಮನಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ವಿಭಾಗ ಸಂಘಟನಾ ಸಹ ಕಾರ್ಯದರ್ಶಿ ಎ.ಎನ್. ನಟರಾಜ್, ಎಸ್. ದತ್ತಾತ್ರಿ, ಮೇಯರ್ ಸುನಿತಾ ಅಣ್ಣಪ್ಪ, ಎನ್.ಜಿ. ನಾಗರಾಜ್, ಜಗದೀಶ್, ಶಿವರಾಜ್, ಬಿ.ಕೆ. ಶ್ರೀನಾಥ್, ಹೃಷಿಕೇಶ್ ಪೈ, ಜ್ಯೋತಿ ಪ್ರಕಾಶ್, ಬಳ್ಳೆಕೆರೆ ಸಂತೋಷ್, ಮೋಹನ್ ರೆಡ್ಡಿ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…