ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ ನಡೆಸಿದರು.
ಪಶ್ಚಿಮ ಘಟ್ಟಗಳ 10 ಜಿಲ್ಲೆಗಳನ್ನೊಳಗೊಂಡ 20 ಸಾವಿರಕ್ಕೂ ಚ.ಕಿ.ಮೀ. ಪ್ರದೇಶವನ್ನು ಕೇಂದ್ರದ ಪರಿಸರ ಇಲಾಖೆ ಅವೈಜ್ಞಾನಿಕವಾಗಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿ ಇದು ಜನವಿರೋಧಿ ಇದರಿಂದ ಅರಣ್ಯವಾಸಿ ಹಾಗೂ ಆದಿವಾಸಿಗಳ ಬದುಕನ್ನು ಕಸಿದುಕೊಂಡಂತಾಗುತ್ತದೆ. ಈಗಿರುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಕಾನೂನುಗಳನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಸಾಕು. ಹೊಸ ಆದೇಶವೇನೂ ಬೇಕಾಗಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.ಸರ್ಕಾರ ತಕ್ಷಣವೇ ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು.
ಬೆಂಗಳೂರಿನಲ್ಲಿ ಜು. 18 ರಂದು ಮಲೆನಾಡು ಭಾಗದ ಶಾಸಕರ, ಜನಪ್ರತಿನಿಧಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ರಾಜ್ಯ ಸರ್ಕಾರ ತಿಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಲ್.ಆರ್. ಗೋಪಾಲಕೃಷ್ಣ, ಹೆಚ್.ಎಂ. ಸಂಗಯ್ಯ, ಟಿ.ಆರ್. ಕೃಷ್ಣಪ್ಪ, ಎಸ್.ವಿ. ರಾಜಮ್ಮ, ಚಾಬೂಸಾಬ್, ಶಂಕ್ರಾನಾಯ್ಕ ಮುಂತಾದವರಿದ್ದರು.