ಶಿವಮೊಗ್ಗ: ಕೇಂದ್ರದ ಬಿಜೆಪಿ ಸರ್ಕಾರ ಇಡಿ ದುರ್ಬಳಕೆ ಮಾಡಿಕೊಂಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ನಗರದ ಶಿವಪ್ಪನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ಕುತಂತ್ರಕ್ಕೆ ನಾವು ಬಗ್ಗುವುದಿಲ್ಲ. ಅಚ್ಛೇ ದಿನ್ ಎಂದು ಸುಳ್ಳು ಹೇಲುವವರಲ್ಲ, ಸಾವಿರಾರು ಜನರನ್ನು ಕೋಮುಗಲಭೆಯಲ್ಲಿ ಕೊಂದು ಹಾಕಿದವರು ಬಿಜೆಪಿಯವರು ಎಂದು ಘೋಷಣೆ ಕೂಗಿದರು.ಇಡಿ ಬರಲಿ, ಐಟಿ ಬರಲಿ ಬಿಜೆಪಿ ದಂಡೇ ಬರಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಮುಟ್ಟಲು ನಾವು ಬಿಡುವುದಿಲ್ಲ. ತನಿಖೆಗೆ ಹೆದರಿ ಓಡಿ ಹೋಗುವವರೂ ಅಲ್ಲ ಎಂದು ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದರು.
ಶಿವಪ್ಪನಾಯಕ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ಬಂಧಿಸಿದರು.ಕೇಂದ್ರ ಬಿಜೆಪಿ ಸರ್ಕಾರ ಇಡಿ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಹಜರಾಗುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ದುರುದ್ದೇಶಪ್ರೇರಿತವಾಗಿ ಇಡಿ ನೋಟಿಸ್ ನೀಡುವುದರ ಮೂಲಕ ಸೇಡು ಮತ್ತು ದ್ವೇಷದಿಂದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಹಮ್ಮದ್, ಶಿವಮೂರ್ತಿ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಚಂದ್ರಭೂಪಾಲ್, ಆರ್.ಎಂ. ಮಂಜುನಾಥಗೌಡ, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಅನಿತಾ ಕುಮಾರಿ, ಡಾ. ಶ್ರೀನಿವಾಸ್ ಕರಿಯಣ್ಣ, ರಮೇಶ್ ಶಂಕರಘಟ್ಟ, ಪಿ.ಒ. ಶಿವಕುಮಾರ್, ವೈ.ಹೆಚ್. ನಾಗರಾಜ್, ಎನ್. ರಮೇಶ್, ಕಿರಣ್, ಹೆಚ್.ಪಿ. ಗಿರೀಶ್, ಸೌಗಂಧಿಕಾ, ಸ್ಟೆಲಾ ಮಾರ್ಟಿನ್, ವಿಜಯಲಕ್ಷ್ಮಿ ಪಾಟೀಲ್, ಟಿ.ಎನ್. ಶಶಿಧರ್, ಎಸ್.ಕೆ. ಮರಿಯಪ್ಪ ಇದ್ದರು.