ಶಿವಮೊಗ್ಗ: ಸಾಮಾಜಿಕ ನ್ಯಾಯದ ಹರಿಕಾರ, ಜನಾಕರ್ಷಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬವನ್ನು ಆ. 3 ರಂದು ದಾವಣಗೆರೆಯಲ್ಲಿ ‘ಸಿದ್ಧರಾಮಯ್ಯ -75 ಅಮೃತ ಮಹೋತ್ಸವ’ ಹೆಸರಲ್ಲಿ ಆಯೋಜಿಸಲಾಗಿದೆ. ಈ ಬೃಹತ್ ಸಮಾರಂಭಕ್ಕೆ ಶಿವಮೊಗ್ಗ ಜಿಲ್ಲೆಯಿಂದಲೂ ಸಾವಿರಾರು ಜನ ಆಗಮಿಸಲಿದ್ದಾರೆ ಎಂದು ಅಮೃತ ಮಹೋತ್ಸವ ಸಮಿತಿ ಶಿವಮೊಗ್ಗ ಜಿಲ್ಲಾ ವೀಕ್ಷಕ ಹಾಗೂ ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಾರಂಭಕ್ಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಂದೀಪ್ ಸುರ್ಜೇವಾಲಾ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಭಾಗವಹಿಸಿಲಿದ್ದಾರೆ ಎಂದರು.ಇದೊಂದು ಅಪೂರ್ವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಿಂದ ರಾಜಕೀಯ ಪಕ್ಷಗಳು ಬೆದರಿ ಹೋಗಿವೆ. ಶಕ್ತಿ ಪ್ರದರ್ಶನವಾಗುತ್ತದೆ. ಭಾರೀ ಜನ ಸೇರುತ್ತಾರೆ. ಏನು ಮಾಡುವುದು ಎಂಬ ಭಯದಲ್ಲಿ ಬಿಜೆಪಿ ಇದೆ. ಅದಕ್ಕಾಗಿಯೇ ಇಂತಹ ಕಾರ್ಯಕ್ರಮವನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂದು ದೂರಿದರು.

ಸಿದ್ಧರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರು. ಶೋಷಿತರ ಪರವಾಗಿ ಕೆಲಸ ಮಾಡಿದವರು. ಅನ್ನಭಾಗ್ಯ ನೀಡಿದವರು, ಇಂತಹ ವ್ಯಕ್ತಿಯ ಬಗ್ಗೆ ಅಭಿಮಾನವಿಟ್ಟು ಕಾಂಗ್ರೆಸ್ ಕಾರ್ಯಕರ್ತರು, ಜನಪ್ರತಿನಿಧಿಗಳು, ಬೆಂಬಲಿಗರು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.ಬಿಜೆಪಿ ಸರ್ಕಾರ ಬಡವರ ಬದುಕನ್ನು ಕಸಿದುಕೊಂಡಿದೆ. ಜನ ವಿರೋಧಿ ಆಡಳಿತ ನೀಡುತ್ತಿದೆ. ಜಿ.ಎಸ್.ಟಿ. ಮೂಲಕ ತಿನ್ನುವ ಅನ್ನಕ್ಕೂ ಕಲ್ಲು ಹಾಕಿದ್ದಾರೆ. ಬಂಡವಾಳಶಾಹಿಗಳ ಪರವಾಗಿದ್ದಾರೆ. ಮೋದಿ ಹೇಳಿದ ಅಚ್ಛೇದಿನ್ ಬಡವರಿಗೆ ಇನ್ನೂ ಬಂದಿಲ್ಲ. ಬೆಲೆ ನಿಯಂತ್ರಣದಲ್ಲಿಲ್ಲ. ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು ನಿಜ. ಆದರೆ, ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರ ಇರುವುದು ಅತ್ಯಂತ ದುರಂತ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ವೀಕ್ಷಕ ಷಡಾಕ್ಷರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪ್ರಮುಖರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಶಾಂತವೀರಪ್ಪಗೌಡ, ಬೇಳೂರು ಗೋಪಾಲಕೃಷ್ಣ, ಬಲ್ಕೀಷ್ ಬಾನು, ಅನಿತಾ ಕುಮಾರಿ, ಪಲ್ಲವಿ, ಬಲದೇವ ಕೃಷ್ಣ, ರಾಜನಂದಿನಿ, ಚಂದ್ರಭೂಪಾಲ್, ಶ್ರೀನಿವಾಸ್ ಕರಿಯಣ್ಣ, ಎನ್. ರಮೇಶ್, ರಮೇಶ್ ಶಂಕರಘಟ್ಟ, ವೈ.ಹೆಚ್. ನಾಗರಾಜ್, ಹೆಚ್.ಪಿ. ಗಿರೀಶ್, ರಾಮೇಗೌಡ, ಕಲ್ಲಗೊಡು ರತ್ನಾಕರ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…