ಶಿವಮೊಗ್ಗ: ಬಿಸಿಯೂಟ ಯೋಜನೆ ಸೇರಿದಂತೆ ಮತ್ತಿತರೇ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿರುವ ಹಾಗೂ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಸೂಳೆಬೈಲ್ನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕನನ್ನು ಸೇವೆಯಿಂದ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕೆಂದು ಆಗ್ರಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸೂಳೆಬೈಲಿನಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 7-8 ವರ್ಷಗಳಿಂದ ಮುಖ್ಯ ಶಿಕ್ಷಕ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಅವಧಿಯಲ್ಲಿ ಬಿಸಿಯೂಟ ಯೋಜನೆ ಸೇರಿದಂತೆ ಮತ್ತಿತರೇ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಿದ್ದು, ಎಸ್.ಡಿ.ಎಂ.ಸಿ ಕಮಿಟಿಯ ಅಧ್ಯಕ್ಷರ ಸಹಿಯನ್ನು ಅಧ್ಯಕ್ಷರ ಗಮನಕ್ಕೆ ತರದೇ ತಾವೇ ಸಹಿ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಹಲವಾರು ವಿದ್ಯಾರ್ಥಿನಿಯರಿಗೆ ಮುಖ್ಯ ಶಿಕ್ಷಕರು ಅಸಭ್ಯವಾಗಿ ಮಾತನಾಡುವುದು, ಮೈಕೈಯನ್ನು ಅಶ್ಲೀಲವಾಗಿ ಮುಟ್ಟುವುದು. ಈ ವಿಚಾರವನ್ನು ಪೋಷಕರಿಗಾಗಲೀ,  ಇತರರಿಗಾಗಲೀ ತಿಳಿಸಿದರೆ ನಿಮಗೆ ಶಿಕ್ಷಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅನೇಕ ದಿನ ಸುಮ್ಮನಿದ್ದ ವಿದ್ಯಾರ್ಥಿನಿಯರು ಈಗ ಒಬ್ಬೊಬ್ಬರಾಗಿ ತಮ್ಮ ಪೋಷಕರಿಗೆ ಈ ವಿಚಾರವನ್ನು ತಿಳಿಸುತ್ತಿದ್ದಾರೆ.

ಆದ್ದರಿಂದ ಕೂಡಲೇ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರ ಸಹಿಯನ್ನು ನಕಲು ಮಾಡಿ ಹಣ ದುರುಪಯೋಗ ಪಡಿಸಿಕೊಂಡಿರುವ ಮುಖ್ಯ ಶಿಕ್ಷಕನನ್ನು ಸೇವೆಯಿಂದ ಅಮಾನತ್ತುಗೊಳಿಸಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ಕಾರ್ಯದರ್ಶಿ ನಿತೀನ್ ರೆಡ್ಡಿ, ಉಪಾಧ್ಯಕ್ಷ ರವಿ ಸಾಧುಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಸಂತೋಷ್, ರಾಘವೇಂದ್ರ, ಪೈಲ್ವಾನ್ಲೋಕೇಶ್, ಅಯೂಬ್ ಇನ್ನಿತರರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…