ಶಿವಮೊಗ್ಗ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ಇಂದು ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಂದರೇಶ್, ದೇಶದಲ್ಲಿ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಬಿಜೆಪಿಯ ಯಾವುದೇ ನಾಯಕರ ಮೇಲೆ ಇಡಿ ದಾಳಿ ಮಾಡಿಲ್ಲ. ಬಂಧಿಸಿಲ್ಲ ಎಂದರು.ವಿಚಾರಣೆಯ ಹೆಸರಲ್ಲಿ ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಸುಮಾರು 50 ಗಂಟೆಗಳ ಕಾಲ ಅನಗತ್ಯ ವಿಚಾರಣೆ ನಡೆಸಿ ಕಿರುಕುಳ ನೀಡಿದ್ದರು. ಬಿಜೆಪಿಯವರ ಯಾವ ಹೆದರಿಕೆಗೂ ನಾವು ಬಗ್ಗುವುದಿಲ್ಲ.
ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದರು.ಪ್ರತಿಭಟನೆಯಲ್ಲಿ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಪ್ರಮುಖರಾದ ರಾಮೇಗೌಡ, ಹೆಚ್.ಪಿ. ಗಿರೀಶ್, ಜಿ.ಡಿ. ಮಂಜುನಾಥ್, ರಾಜಶೇಖರ್, ಪಲ್ಲವಿ, ವಿಜಯಲಕ್ಷ್ಮಿ ಪಾಟೀಲ್, ನಾಜೀಮಾ, ಪ್ರೇಮಾ, ಸ್ಟೆಲಾ ಮಾರ್ಟಿನ್, ಚಂದ್ರಕಲಾ, ಅರ್ಚನಾ, ಶೋಭಾ, ಶಾರದಾ ಮೊದಲಾದವರಿದ್ದರು.