ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಬಡವರ ಮಕ್ಕಳೇ ಏಕೆ ಹತ್ಯೆಯಾಗುತ್ತಿದ್ದಾರೆ? ರಾಜಕಾರಣಿಗಳ ಮಕ್ಕಳು ಏಕೆ ಸುರಕ್ಷಿತರಾಗಿರುತ್ತಾರೆ ಎಂದು ಜನರೇ ಯೋಚಿಸಬೇಕಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ಸಂಪೂರ್ಣ ವಿಫಲವಾಗಿದೆ. ಅಸಹ್ಯಕರವಾದ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಹಪಾಹಪಿತನ ಮಾಡುತ್ತಿದ್ದಾರೆ. ಹತ್ಯೆಯಂತಹ ಘಟನೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಧರ್ಮವನ್ನು ಮುಂದೆ ತಂದು ದ್ವೇಷ ಬೆಳೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಅರಾಜಕತೆಯೇ ಉಂಟಾಗುತ್ತಿದೆ. ಇಂತಹ ನೀಚತನದ ರಾಜಕೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಎಂದೂ ಕಂಡುಬಂದಿರಲಿಲ್ಲ ಎಂದರು.ರಾಮರಾಜ್ಯವನ್ನು ಮಾಡುತ್ತೇವೆ ಎಂದು ಹೊರಟವರು ಇಂದು ಗೂಂಡಾರಾಜ್ಯವನ್ನಾಗಿ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದುವರೆಗೂ ನಡೆದ ಹತ್ಯೆಯ ಘಟನೆಗಳಲ್ಲಿ ರಾಜಕಾರಣಿಗಳ ಮಕ್ಕಳು ಯಾರೂ ಸತ್ತಿಲ್ಲ. ಕೊಲೆಯಾದವರು ಹಿಂದುಳಿದವರು, ದಲಿತರು, ಬಡವರ ಮಕ್ಕಳು. ಇಂತಹ ಸಾವಿನ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟಿರುವ ಬಿಜೆಪಿಯವರಿಗೆ ಕನಿಷ್ಠ ಕರುಣೆಯೂ ಇಲ್ಲ ಎಂದರು.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮನೆಯಲ್ಲಿ ಯಾರು ನೊಂದಿದ್ದಾರೆ. ಹಾಗೆಯೇ ಈಶ್ವರಪ್ಪ, ಆರಗ ಜ್ಞಾನೇಂದ್ರ ಸೇರಿದಂತೆ ರಾಜಕಾರಣಿಗಳ ಮಕ್ಕಳು ಸುರಕ್ಷಿತವಾಗಿಲ್ಲವೇ? ಆದರೆ, ನಿಜಕ್ಕೂ ಬಲಿಯಾಗುವುದು ಯಾರು? ಆರ್.ಎಸ್.ಎಸ್. ಮುಖಂಡರ ಮಕ್ಕಳಿಗೆ ಏನು ತೊಂದರೆಯಾಗಿದೆ. ಬಲಿಯಾಗಿರುವುದು ಬಡವರು ಮಾತ್ರ ಎಂದರು. ಎಲ್ಲಾ ಘಟನೆಗಳಿಗೂ ಕಾಂಗ್ರೆಸ್ ಪಕ್ಷವನ್ನು ಜೋಡಿಸುವ ಕೆಲಸಕ್ಕೆ ಬಿಜೆಪಿಯವರು ಕೈಹಾಕಿದ್ದಾರೆ. ಪಾಕಿಸ್ತಾನದ ಉಗ್ರರು ಈ ಬಿಜೆಪಿ ಸರ್ಕಾರದಲ್ಲಿಯೇ ನುಸಳಿಬರುತ್ತಿದ್ದಾರೆ. ಈ ದೇಶದ ಪ್ರಧಾನಿ ಅತ್ಯಂತ ದುರ್ಬಲರಾಗಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳು ಇಂತಹ ಸರ್ಕಾರಕ್ಕೆ ಸಹಕಾರ ನೀಡುವುದು ದುರಾದೃಷ್ಟಕರ. ದಾವೂದ್ ಇಬ್ರಾಹಿಂನನ್ನು ಹಿಡಿದು ತರುತ್ತೇವೆ ಎಂದು ಹೇಳಿದವರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.ಬಿಜೆಪಿ ಸರ್ಕಾರ ಧರ್ಮಾಂಧವಾಗಿ ಕೆಲಸ ಮಾಡುತ್ತಿದೆ. ಹತ್ಯೆಯಾದವರೆಲ್ಲರೂ ಒಂದೇ. ಎಲ್ಲರ ಮೈಯಲ್ಲಿ ಹರಿಯುತ್ತಿರುವುದು ಕೆಂಪು ರಕ್ತ. ಆದರೆ, ಈ ಕೆಂಪು ರಕ್ತಕ್ಕೆ ಕೇಸರಿ ಬಣ್ಣವನ್ನು ಸೇರಿಸಲು ಹೊರಟಿದ್ದಾರೆ.

ಹರ್ಷನ ಕೊಲೆಯಾಯ್ತು. ಪ್ರವೀಣ್ ಕೊಲೆಯಾಯ್ತು. ಅವರ ಮನೆಗೆ ಹೋಗಿ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರ ನೀಡಿದರು. ಅದು ಸ್ವಾಗತವೇ. ಆದರೆ, ಅದೇ ಸಮಯದಲ್ಲಿ ಫಾಸಿಲ್, ಮಸೂದ್ ಕೂಡ ಹತ್ಯೆಯಾಗಿದ್ದಾರೆ. ಅವರ ಮನೆಗೆ ಏಕೆ ಹೋಗಿಲ್ಲ. ಅವರಿಗೇಕೆ ಪರಿಹಾರ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಅವರು ಎಲ್ಲರ ಹತ್ಯೆಗಳನ್ನು ಶೀಘ್ರವೇ ಭೇದಿಸಬೇಕು. ಅದಕ್ಕಾಗಿ ಶೀಘ್ರ ನ್ಯಾಯಾಲಯ ಸ್ಥಾಪಿಸಬೇಕು. ಆರೋಪಿಗಳು ಯಾರೇ ಇರಲಿ ಅವರಿಗೆ ತಕ್ಕ ಶಿಕ್ಷೆ ನೀಡಲಿ ಎಂದರು.ಕೆ.ಎಸ್. ಈಶ್ವರಪ್ಪ ಅವರಿಗೆ ಸಿದ್ಧರಾಮಯ್ಯ ಅವರನ್ನು ಬೈಯುವುದು ಬಿಟ್ಟರೆ ಬೇರೆನೂ ಕೆಲಸವೇ ಇಲ್ಲ. ಅವರ ಪಕ್ಷದ ಮುಖಂಡರು ಅದಕ್ಕಾಗಿಯೇ ಅವರನ್ನು ಏಜೆಂಟರಂತೆ ನೇಮಿಸಿದ್ದಾರೆ. ಸಿದ್ಧರಾಮಯ್ಯ ಆರ್.ಎಸ್.ಎಸ್. ಕಾರ್ಯಕರ್ತನ ಧೂಳಿಗೂ ಸಮ ಅಲ್ಲ ಎಂದು ಈಶ್ವರಪ್ಪ ಟೀಕಿಸಿದ್ದಾರೆ. ಈ ಆರ್.ಎಸ್.ಎಸ್. ಏನು? ಅವರಿಂದ ಈ ದೇಶಕ್ಕೆ ಏನು ಒಳ್ಳೆಯದಾಗಿದೆ? ಅವರೇನು ತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಈಶ್ವರಪ್ಪ ಎ 1 ಆರೋಪಿಯಾಗಿದ್ದರು. ಪ್ರಭಾವ ಬೆಳೆಸಿ ಬಿ ರಿಪೋರ್ಟ್ ಮಾಡಿಸಿಕೊಂಡಿದ್ದಾರೆ. ಅವರು ಕಾನೂನಿನಿಂದ ಬಚಾವಾಗಬಹುದು. ಆದರೆ, ಸಂತೋಷ್ ಪಾಟೀಲ್ ಕುಟುಂಬದ ಶಾಪದಿಂದ ಬಚಾವಾಗಲು ಸಾದ್ಯವಿಲ್ಲ. ಅವರಿಗೆ ಈಗಲೂ ಸಮಯವಿದೆ. ಸಂತೋಷ್ ಪಾಟೀಲ್ ಅವರ ಮನೆಗೆ ಹೋಗಿ ಕೈಮುಗಿದು ಅವರಿಗೆ ಕೊಡುವ ದುಡ್ಡು ಕೊಡಿಸಿ ಬರಲಿ. ಹೋಮ ಬಿಟ್ಟು ಅವರ ಹೋಮ್ ಗೆ ಹೋಗಲಿ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಸೌಗಂಧಿಕಾ, ಇಕ್ಕೇರಿ ರಮೇಶ್, ಡಿ.ಸಿ. ನಿರಂಜನ್, ಚಂದನ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…