ಶಿವಮೊಗ್ಗ: ಕಾರ್ಗಿಲ್ ಯುದ್ಧದ ವಿಜಯ ಐತಿಹಾಸಿಕವಾಗಿದ್ದು, ಮಾತೃಭೂಮಿ ಹಾಗೂ ದೇಶದ ಸೇವೆಗೆ ಅವಕಾಶ ಸಿಗುವುದು ನಮ್ಮ ಪುಣ್ಯ. ದೇಶಕ್ಕಾಗಿ ಸೇನೆಯಲ್ಲಿ ಕೆಲಸ ಮಾಡಿದ ಅನುಭವ ವಿಶಿಷ್ಟವಾದುದು ಎಂದು ನಿವೃತ್ತ ಸೈನಿಕ ಎನ್.ಎಸ್.ಉಪಾಧ್ಯ ಹೇಳಿದರು.

ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಪ್ರಯುಕ್ತ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ರೋಟರಿ ಪೂರ್ವ ವಾರದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸೈನಿಕನಾಗಿ ಸೇವೆ ಸಲ್ಲಿಸುವ ಅವಕಾಶದಲ್ಲಿ ಎಂತಹ ಕಷ್ಟ ಬಂದರೂ ಎದುರಿಸುವ ಮನೋಭಾವ ನಮ್ಮಲ್ಲಿ ಬೆಳೆಯುತ್ತದೆ. ಕಠಿಣ ಪರಿಸ್ಥಿತಿಗಳಲ್ಲೂ ಎಲ್ಲ ಸೈನಿಕರು ದೇಶಕ್ಕಾಗಿ ಹೋರಾಡಿ ಎದುರಾಳಿಗಳನ್ನು ಸದೆಬಡಿಯುತ್ತಾರೆ. ದೇಶದ ರಕ್ಷಣೆಗಾಗಿ ಸೈನಿಕರು ತಮ್ಮ ಜೀವವನ್ನೇ ಮುಡಿಪಾಗಿಡುತ್ತಾರೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ದೇಶವನ್ನು ಕಾಯುವ ಸೈನಿಕ ಹಾಗೂ ಅನ್ನ ಕೊಡುವ ರೈತರನ್ನು ಗೌರವಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶ ವಿಜಯದ ಕೀರ್ತಿ ಪತಾಕೆ ಹಾರಿಸಿ 23 ವರ್ಷವಾಗಿದೆ. ಸೈನಿಕರ ದೇಶಪ್ರೇಮ ನಮ್ಮೆಲ್ಲರಿಗೂ ಪ್ರೇರಣೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಮಾಡಬೇಕಾದ ಕರ್ತವ್ಯ. ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ದೇಶದ ಸೇನೆಯಲ್ಲಿ ಸೇವೆ ಮಾಡಿರುವ ವೀರಯೋಧ ಎನ್.ಎಸ್.ಉಪಾಧ್ಯ ಅವರನ್ನು ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಶ್ರೇಯಾ, ಚಂದನ ಹಾಗೂ ಪ್ರಜ್ವಲ್ ಅವರು ದೇಶಭಕ್ತಿ ಗೀತೆಗಳನ್ನು ಹಾಡಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕೆ.ಕುಮಾರಸ್ವಾಮಿ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಪಿಡಿಜಿ ಎಚ್.ಎಲ್.ರವಿ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಧುರಾ ಮಹೇಶ್, ಬಿಂದು ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…