ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ ಎನ್ನುವಾಗ ಶಿವಮೊಗ್ಗದ ನಾಗರೀಕರಾದ ನಾವೆಲ್ಲರೂ ಹೆಮ್ಮೆಯಿಂದ ಬೀಗುತ್ತಿದ್ದೆವು. ನಮ್ಮೂರು ಸಿಂಗಾಪುರದಂತೆಯೇ ಸೌಕರ್ಯ ಮತ್ತು ಸೌಂದರ್ಯ ಭರಿತ ನಗರವಾಗಲಿದೆ ಎನ್ನುವ ದೊಡ್ಡ ಆಸೆಯನ್ನು ಹೊತ್ತಿದ್ದೆವು.
ಆದರೆ ಇಂದು ಆ ಎಲ್ಲ ಆಸೆ, ಆಕಾಂಕ್ಷೆಗಳು ಸಂಪೂರ್ಣ ಕಮರಿ ಹೋಗಿವೆ.

ಬದಲಾಗಿ ಪ್ರತಿನಿತ್ಯವೂ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಗಳಿಗೆ, ಕಳಪೆ ಗುಣಮಟ್ಟದ ಕಾಮಗಾರಿಗಳಿಗೆ, ಹೆಜ್ಜೆ ಹೆಜ್ಜೆಗೂ ಕಂಡುಬರುವ ಅವಾಂತರಗಳಿಗೆ, ನಗರದ ಅನೇಕ ಬಡಾವಣೆಗಳ ಮನೆಗಳು ಮಳೆ ಮತ್ತು ಕೊಚ್ಚೆ ನೀರುಗಳ ಪಾಲಾಗುತ್ತಿರುವುದನ್ನು ನೋಡಿ ನಾಗರಿಕರು ಹಿಡಿ ಶಾಪ ಹಾಕುವುದೇ ಆಗಿದೆ.
ಕಳೆದ ನಾಲ್ಕು ವರ್ಷಗಳಿಂದ ಇಂತಹ ಅನೇಕ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ಗುರುತಿಸಿ ಹೋರಾಟಗಳನ್ನು ನಡೆಸಿ ಶಾಸಕರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಇಂಜಿನಿಯರ್ಸ್ಗಳ ಗಮನಕ್ಕೆ ನಿರಂತರವಾಗಿ ತಂದಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಗೆ ನೀಡುತ್ತಿರುವ ಒಂದು ಸಾವಿರ ಕೋಟಿ ಹಣ ಸಾರ್ವಜನಿಕರ ತೆರಿಗೆ ಹಣವಾಗಿದೆ.

ಈ ಹಣ ದುರುಪಯೋಗವಾಗಬಾರದು ಎನ್ನುವ ಸದುದ್ದೇಶದಿಂದ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ನಾಳೆಯಿಂದಲೇ ‘ಸರಣಿ ಧರಣಿ’ ಹೋರಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ತಮ್ಮ ಆಹವಾಲನ್ನು ಫೋಟೋ ಸಮೇತ ವೇದಿಕೆಯ ಪದಾಧಿಕಾರಿಗಳಿಗೆ ಕಳುಹಿಸಿಕೊಡಬಹುದು. ಹಾಗೂ ನಾಳೆಯಿಂದ ಪ್ರಾರಂಭವಾಗುವ ನಮ್ಮ ಹೋರಾಟಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನ್ಯಾಯದ ವಿರುದ್ಧದ ಈ ಹೋರಾಟಕ್ಕೆ ಕೈಜೋಡಿಸಲೇಬೇಕು ಎಂದು ಕೋರಿದ್ದಾರೆ.

ಸ್ಥಳ-ಗೋಪಾಲ್ ಗೌಡ ಬಡಾವಣೆ ಪೆಟ್ರೋಲ್ ಬಂಕ್ ಹತ್ತಿರ ಬೆಳಗ್ಗೆ 11 ಗಂಟೆಗೆ…

ಕೆ.ವಿ.ವಸಂತಕುಮಾರ್,
ಪ್ರಧಾನ ಕಾರ್ಯದರ್ಶಿ ಮತ್ತು
ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ…