ಶಿವಮೊಗ್ಗ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಅವರ ಬೇಡಿಕೆಗಳನ್ನು ಈಡೇರಿಸುಲು ಅನುಕೂಲವಾಗುವಂತೆ ಸರ್ಕಾರ ಟೈಲರ್ಸ್ ಕ್ಷೇಮನಿಧಿ ಮಂಡಳಿ ರಚಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ಘಟಕ ಆಗ್ರಹಿಸಿದೆ.

ಇಂದು ಮೀಡಿಯಾ ಹೌಸ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಏಳುಮಲೈ (ಕೇಬಲ್ ಬಾಬು), ಟೈಲರ್ಸ್‍ಗಳು ಸಂಕಷ್ಟದಲ್ಲಿದ್ದಾರೆ. ಕೋವಿಡ್ ಸಮಯದಲ್ಲಂತೂ ಅವರ ಆರ್ಥಿಕ ಪರಿಸ್ಥಿತಿ ಕ್ಷೀಣವಾಗಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಪ್ರತಿಭಟನೆ, ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೂ ಕೂಡ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಿಲ್ಲ. ಅವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ತಕ್ಷಣವೇ ಕ್ಷೇಮನಿಧಿ ಮಂಡಳಿ ರಚಿಸಬೇಕು ಎಂದರು.

ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಟೈಲರ್ಸ್‍ಗಳಿದ್ದಾರೆ. ಜಿಲ್ಲೆಯಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಇವರೆಲ್ಲರೂ ಇಂದಿನ ತಾಂತ್ರಿಕ ಕಾಲದಲ್ಲಿ ಕೆಲಸವಿಲ್ಲದೇ ಆದಾಯ ಗಳಿಸಲಾಗುತ್ತಿಲ್ಲ. ಜೀವನ ಕಷ್ಟವಾಗಿದೆ. ಸರ್ಕಾರ 60 ವರ್ಷಕ್ಕೆ ಮೇಲ್ಪಟ್ಟ ಟೈಲರ್‍ಗಳಿಗೆ ಮಾಸಿಕ 3 ಸಾವಿರ ಪಿಂಚಣಿ ನೀಡಬೇಕು. ಅವರ ಕುಟುಂಬ ವರ್ಗಕ್ಕೆ ನೆರವು ನೀಡಬೇಕು. ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು. ಸರ್ಕಾರದಿಂದ ಸಾಲಸೌಲಭ್ಯ ಒದಗಿಸಬೇಕು ಎಂದರು.

ನಾನು ಕೂಡ ಟೈಲರ್ಸ್ ವೃತ್ತಿಯನ್ನು ಮಾಡಿದ್ದೇನೆ. ಅವರ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದೇನೆ. ಈ ಕಾರಣಕ್ಕಾಗಿ ನಮ್ಮ ಪಕ್ಷ ರಾಜ್ಯದಾದ್ಯಂತ ಇರುವ ಟೈಲರ್ಸ್‍ಗಳ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಮುಖಂಡ ಕಿರಣ್ ಪ್ರಮುಖರಾದ ಲಕ್ಷ್ಮೀಶ್, ಅರುಣ್, ಶ್ರೀನಿವಾಸ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…