ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಿಂದ ಅಭಿವೃದ್ಧಿಪಡಿಸಿದ ಡಿವಿಎಸ್ ಮತ್ತು ಕಾನ್ವೆಂಟ್ ರಸ್ತೆ ಕೇವಲ ಎರಡು ತಿಂಗಳಲ್ಲಿ ಸಂಪೂರ್ಣ ಹಾಳಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಇಂದು ನಗರದ ಡಿವಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆದು ಕೇವಲ ಎರಡು ತಿಂಗಳಲ್ಲಿಯೇ ಸಂಪೂರ್ಣವಾಗಿ ಹಾಳಾಗಿವೆ. ಅದರಲ್ಲೂ ಡಿವಿಎಸ್ ಮತ್ತು ಕಾನ್ವೆಂಟ್ ರಸ್ತೆಯ ಕಾಮಗಾರಿ ಗುಣಮಟ್ಟದಲ್ಲೂ ಕಳಪೆಯಾಗಿದ್ದು, ಸಂಬಂಧಪಟ್ಟ ಇಂಜಿನಿಯರ್ ಗಳು, ಗುತ್ತಿಗೆದಾರರು, ಅಧಿಕಾರಿಗಳು ಇದಕ್ಕೆ ಜವಾಬ್ದಾರರಾಗಿದ್ದಾರೆ. ಅವರಿಂದಲೇ ಹಣವನ್ನು ತುಂಬಿಕೊಡಬೇಕು ಎಂದು ಒತ್ತಾಯಿಸಿದರು.ಅಲ್ಲದೇ, ರಾಷ್ಟ್ರಿಯ ಆಸ್ತಿಯಾದ ಜಲ್ಲಿ, ಮರಳು, ಬಿಟುಮಿನ್ ನಷ್ಟವಾಗಿದ್ದು, ನಷ್ಟವಾಗಿದ್ದು, ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಠಾರೆ ವಸ್ತುಸ್ಥಿತಿ ಒಪ್ಪಿಕೊಳ್ಳುತ್ತಿಲ್ಲ. ಅವರ ಮೇಲೆ ನಂಬಿಕೆಯೂ ನಮಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಇದುವರೆಗೂ ನಡೆದ ಕಾಮಗಾರಿಗಳ ದಾಖಲಾತಿಗಳನ್ನು ತಮ್ಮ ವಶಕ್ಕೆ ಪಡೆಯಬೇಕು. ಸ್ವತಂತ್ರ ಏಜೆನ್ಸಿಯಿಂದ ತನಿಖೆಯಾಗಬೇಕು. ಇದಕ್ಕೆ ಜವಾಬ್ದಾರರಾದ ಅಧಿಕಾರಿಗಳ ಬಗ್ಗೆ ಸರ್ಕಾರಕ್ಕೆ ವರದಿ ಮಾಡಬೇಕು. ಮತ್ತು ಆರ್ಥಿಕ ನಷ್ಟವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ.ವಿ. ವಸಂತಕುಮಾರ್, ಸೀತಾರಾಂ, ಸಂದೀಪ್, ವೇದಮೂರ್ತಿ, ಡಾ.ಸತೀಶ್ ಕುಮಾರ್ ಶೆಟ್ಟಿ, ಮನೋಹರ್ ಗೌಡ, ಸತೀಶ್, ಚನ್ನವೀರಪ್ಪ ಗಾಮನಗಟ್ಟಿ, ಜಫ್ರುಲ್ಲಾ ಖಾನ್ ಮೊದಲಾದವರಿದ್ದರು.