ನಮ್ಮ ಭಾರತ ದೇಶವು 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆಯಿತು.ಬ್ರಿಟಿಷರ ದಬ್ಬಾಳಿಕೆಯ ಕಪಿಮುಷ್ಟಿಯಲ್ಲಿ ಸುಮಾರು 300 ವರ್ಷಗಳ ಕಾಲ ನಲುಗಿಹೋಗಿತ್ತು. ನಮಗೆ ಸಿಕ್ಕ 47 ರ ಸ್ವಾತಂತ್ಯ ಹಲವು ದೇಶಭಕ್ತರ, ಜನಸಾಮಾನ್ಯರ, ರಾಷ್ಟ್ರನಾಯಕರ ತ್ಯಾಗ ಬಲಿದಾನದಿಂದ ಪಡೆದುದಾಗಿದೆ.
ನಮ್ಮ ದೇಶವು ಸ್ವಾತಂತ್ರ್ಯಗೊಂಡು ಅಮೃತ ವರ್ಷ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ…. ನಮ್ಮ ದೇಶಕ್ಕೆ, ನಮ್ಮ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ.ನಾವು ಪಡೆದ ಸ್ವಾತಂತ್ರ್ಯ ಬಹಳ ಸುಲಭವಾಗಿ ಸಿಕ್ಕಿರುವುದಂತದ್ದಲ್ಲ…..ಈ ಸ್ವಾತಂತ್ರ್ಯ ಸಂಭ್ರಮದ ಹಿಂದೆ ಹಲವು ರಾಷ್ಟ್ರನಾಯಕ ರ ತ್ಯಾಗ ಬಲಿದಾನವಿದೆ…..ಲಕ್ಷಾಂತರ ಜನ ಸಾಮಾನ್ಯರು ಬ್ರಿಟಿಷರ ಬೂಟಿನ ತುಳಿತಕ್ಕೆ ಒಳಗಾಗಿ, ಲಾಠಿ ಏಟಿನ ಬರೆ ಬೀಳಿಸಿಕೊಂಡು….ಗುಂಡೇಟಿಗೆ ಎದೆಯೊಡ್ಡಿ ರಕ್ತದೋಕುಳಿ ಹರಿಸಿ,…ನೇಣುಗಂಬಕ್ಕೆ ತಮ್ಮ ಉಸಿರನ್ನು ಈ ದೇಶಕ್ಕಾಗಿ ನೀಡಿ….ಸ್ವಾತಂತ್ರ್ಯ ವನ್ನು ತಂದಿಟ್ಟಿದ್ದಾರೆ.
ಭಗತ್ ಸಿಂಗ್,ಚಂದ್ರಶೇಖರ್ ಆಜಾದ್,ಸಂಗೊಳ್ಳಿ ರಾಯಣ್ಣ ರಂತಹ ಅಪ್ಪಟ ದೇಶಭಕ್ತರು ಭಾರತಾಂಬೆಯ ಬಿಡುಗಡೆಗಾಗಿ ನೇಣುಹಗ್ಗಕ್ಕೆ ಕೊರಳೊಡ್ಡಿ ವೀರ ಮರಣದಿಂದ ಪಡೆದ ಸ್ವಾತಂತ್ರ್ಯವಾಗಿದೆ.ಮಹಾತ್ಮ ಗಾಂಧೀಜಿ, ದಾದಾಬಾಯಿ ನವರೋಜಿ,ಲಾಲಾ ಲಜಪತ್ ರಾಯ್,ಬಾಲಗಂಗಾಧರ ತಿಲಕ್,ಬಿಪಿನ್ ಚಂದ್ರಪಾಲ್,ಮೋತಿಲಾಲ ನೆಹರು,ಸುಭಾಷ್ ಚಂದ್ರಬೋಸ್,ಜವಾಹರಲಾಲ್ ನೆಹರು,ಲಾಲ್ ಬಹಾದ್ದೂರ್ ಶಾಸ್ತ್ರಿ..ಬಿ.ಆರ್.ಅಂಬೇಡ್ಕರ್,ಮೌಲಾನಾ ಅಬ್ದುಲ್ ಕಲಾಂ ಅಜಾದ್, ಕಿತ್ತೂರು ರಾಣಿ ಚೆನ್ನಮ್ಮ..ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಾರ್ನಾಡ್ ಸದಶಿವರಾವ್, ಹರ್ಡೇಕರ್ ಮಂಜಪ್ಪ,ಗಂಗಾಧರ ರಾವ್ ದೇಶಪಾಂಡೆ, ಹೆಚ್ .ಎಸ್.ದೊರೆಸ್ವಾಮಿ,ಶಿವಮೊಗ್ಗದ ಖಾದಿ ಶಂಕರಪ್ಪ,ಇನ್ನು ಮುಂತಾದ ದೇಶಾಭಿಮಾನಿಗಳ, ರಾಷ್ಟ್ರನಾಯಕರ ಹೋರಾಟದ ಪರಿಶ್ರಮ ಅಡಗಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಚಳುವಳಿಗಳು,ಹೋರಾಟ ಗಳನ್ನು ದೇಶಾದ್ಯಂತ ಜನರನ್ನು ಒಗ್ಗೂಡಿಸಿ..ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಮಹಾತ್ಮ ಗಾಂಧೀಜಿ ಯವರಂತಹ ರಾಷ್ಟ್ರಪಿತನ ಅಗತ್ಯತೆಯಿತ್ತು.ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಹಲವಾರು ಚಳುವಳಿಗಳು, ಉಪವಾಸ ಸತ್ಯಾಗ್ರಹ ಗಳು ನಡೆದವು.ದೇಶದ ಉತ್ತರದಿಂದ ದಕ್ಷಿಣದ ವರೆಗೆ ,ಪೂರ್ವದಿಂದ ಪಶ್ಚಿಮದವರೆಗೆ ಸಾಗರೋಪಾದಿಯಲಿ ಚಳುವಳಿಯಲ್ಲಿ ಧುಮುಕಿದ ಜನಸಾಗರವ ನೋಡಿ ಬ್ರಿಟಿಷ್ ಸರ್ಕಾರ ಕೊನೆಗೂ ಮಂಡಿಯೂರಲೇ ಬೇಕಾಯಿತು.ಸುಭಾಷ್ ಚಂದ್ರಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ ಯ ಹೋರಾಟವನ್ನು ನಾವಿಲ್ಲಿ ಸ್ಮರಿಸಲೇಬೇಕು.
ಹಾಗೂ ಬಾಲ ಗಂಗಾಧರ ತಿಲಕರ ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು ಅದನ್ನು ಪಡೆದೇ ತೀರುತ್ತೇನೆ ಎನ್ನುವ ಘೋಷಣೆ ಹೋರಾಟದ ತೀವ್ರತೆಯನ್ನು ಹೆಚ್ಚಿಸಿತು.ಗಾಂಧೀಜಿಯವರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ತೀವ್ರ ಸ್ವರೂಪ ಪಡೆಯಿತು.
ಅರೆನಗ್ನ ಫಕೀರನೆಂದು ಗಾಂಧೀಜಿಯನ್ನು ಹೀಯಾಳಿಸಿದ ಬ್ರಿಟಿಷ್ ಸರ್ಕಾರ ಗಾಂಧೀಜಿ ಯವರ ಶಾಂತಿ, ಅಹಿಂಸಾ ಮಂತ್ರಕ್ಕೆ ಶಿರಬಾಗಿ 1947 ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ದೇಶದ ಸ್ವಾತಂತ್ರ್ಯ ವನ್ನು ಭಾರತೀಯರ ಕೈಗಿಟ್ಟು ಹೊರಟಿತು.ನಂತರದ ದಿನಗಳಲ್ಲಿ ತನ್ನದೇ ಆದ ಸಂವಿಧಾನ ರಚನೆಗೊಂಡು, ಸರ್ವಸ್ವತಂತ್ರ, ಸಾರ್ವಬೌಮ, ಸಮಾನತೆ,ಭ್ರಾತೃತ್ವದ,ವಿವಿಧತೆಯಲ್ಲಿ ಏಕತೆಯನ್ನು ಸಾರುವ, ತತ್ವ ಆದರ್ಶಗಳನ್ನೊಳಗೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದೇವೆ.ಹಲವು ಮಹನೀಯರು ತಂದಿತ್ತ ಈ ಸ್ವಾತಂತ್ರ್ಯ ಸ್ವೇಚ್ಚಾಚಾರವಾಗದಿರಲಿ.ದೇಶದ ಪ್ರಗತಿ, ಭದ್ರತೆ,ಏಕತೆಯಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ.ದೇಶಪ್ರೇಮ,ಸಹೋದರತೆ,ಸಮಾನತೆ,ಸರ್ವಧರ್ಮ ಸಹಿಷ್ಣುತೆ,ರಾಷ್ಟ್ರೀಯ ಭಾವೈಕ್ಯತೆ ಎಂಬ ಮೂಲಮಂತ್ರ ನಮ್ಮದಾಗಿರಲಿ.ಆಗ ಮಾತ್ರ ಅನೇಕ ಮಹನೀಯರು ಸುಮಾರು ಒಂದು ಶತಮಾನಕಾಲ ಹೋರಾಡಿ ಪಡೆದ ಸ್ವಾತಂತ್ರ್ಯ ವು ಸಾರ್ಥಕವಾಗುವುದು.ನಮ್ಮ ದೇಶ ಇಂದು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಅಭಿವೃದ್ಧಿ ಹೊಂದಿದ ದೇಶದ ಸಾಲಿಗೆ ಸೇರಿದೆ..ಪರಂಪರೆ,ಸಂಸ್ಕೃತಿ , ತತ್ವ ಆದರ್ಶಗಳಿಂದ ಇತರೆ ದೇಶಕ್ಕೆ ಮಾದರಿಯಾಗಿದೆ.ದೇಶದ ಪ್ರಗತಿ, ಆಂತರಿಕ ಶಾಂತಿ ಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.ಈ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು.ಮುಂದಿನ ಯುವ ಪೀಳಿಗೆಗಾಗಿ ಸದೃಢ ಭಾರತದ ನಿರ್ಮಾಣದಲ್ಲಿ ಕೈಜೋಡಿಸೋಣ.
ಹರ್ ಘರ್ ತಿರಂಗಾ…
ಈ ಅಭಿಯಾನವು ಪ್ರತಿಯೊಬ್ಬರಲ್ಲೂ ದೇಶಪ್ರೇಮವನ್ನು ಜಾಗೃತಗೊಳಿಸುವ ಸಲುವಾಗಿ….ನಾವೆಲ್ಲರೂ ಒಂದೇ ಅಖಂಡ ಭಾರತದ ಪ್ರಜೆಗಳು ನಾವೆಲ್ಲಾ ಒಂದೇ ಎಂದು ಮತ್ತೊಮ್ಮೆ ಸಾರುವ ಸಲುವಾಗಿ, ಸ್ವಾತಂತ್ರ್ಯ ತಂದಿಟ್ಟ ಹುತಾತ್ಮರ ಸ್ಮರಿಸಿ ಗೌರವಿಸುವುದ್ದಕ್ಕಾಗಿ ಮಾಡಲಾಗಿದೆ.
ಇಂಥಹ ಮಹೋನ್ನತ ಸ್ವಾತಂತ್ರ್ಯ ವು ಪ್ರತಿ ಕ್ಷಣ…ಪ್ರತಿಯೊಬ್ಬರಿಗೂ….ಸರ್ವ ಸಮಾನತೆಯ ಸ್ವಾತಂತ್ರ್ಯ ವಾಗುಳಿಯಲಿ …ಎಂಬುದು ನನ್ನನ್ನು ಸೇರಿಸಿಕೊಂಡು… ಹಲವರ ಮಹದಾಶಯವಾಗಿದೆ.
ಸರ್ವ ಸಮಾನತೆಯ, ಸ್ವಾತಂತ್ರ್ಯ ಪ್ರತಿಯೊಬ್ಬ ಭಾರತೀಯನಿಗೂ ಸಿಕ್ಕಿದೆಯೇ….ಎಂದು ಪ್ರಶ್ನಿಸಿಕೊಂಡರೆ…????…ಪೂರ್ಣ ಪ್ರಮಾಣದ ಉತ್ತರ ಸಿಗಲಾರದು.
ಇನ್ನು…ನಮ್ಮ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಘನತೆಯಿದೆ..ಮಹತ್ವವಿದೆ.ದೇಶಪ್ರೇಮ ಪ್ರತಿಯೊಬ್ಬರಲ್ಲೂ ಜೀವಂತವಾಗಿರಲಿ..ಜಾಗೃತವಾಗಿರಲಿ.ಆದರೆ ನಮ್ಮ ರಾಷ್ಟ್ರಧ್ವಜ …ನಮ್ಮ ಅಖಂಡ ಭಾರತದ ಅಸ್ಮಿತೆ…ಇದಕ್ಕೆ ಎಲ್ಲೂ.. ಎಂದಿಗೂ ಚ್ಯುತಿ ಬರದ ಹಾಗೆ..ಬಹಳ ಎಚ್ಚರಿಕೆಯಿಂದ….ನಿಯಮವನ್ನು ಅರಿತು..ಪಾಲಿಸಿ..ಏರಿಸೋಣ.ಹಾರೈಸೋಣ.
ರಾಷ್ಟ್ರಧ್ವಜ ಹಾಗೂ ಎಲ್ಲಾ ರಾಷ್ಟ್ರಲಾಂಛನಗಳ ಘನತೆಯನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ.
ಹರ್ ಘರ್ ತಿರಂಗಾ….
ಪ್ರತಿ ಮನೆಗೂ ತ್ರಿವರ್ಣ
ಧ್ವಜ ಹಾರಿದ ಹಾಗೆ
ಮನೆ ಮನಗಳು ಒಂದಾಗಲಿ
ನಾವೆಲ್ಲಾ ಭಾರತಿಯರೆಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವಗಳು ದೂರವಾಗಿ
ನಾವೆಲ್ಲಾ ಒಂದೇ….ಎಂದು ಕೂಗಿ
ಹೇಳಿ…..ನಾವು ಭಾರತೀಯರು.