ಶಿವಮೊಗ್ಗ: ಹೋರಾಟಗಾರರ ತ್ಯಾಗ, ಬಲಿದಾನದಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ದೇಶಕ್ಕಾಗಿ ಜೀವನ ಮುಡಿಪಿಟ್ಟ ಹೋರಾಟಗಾರರ ಆದರ್ಶ ನಮಗೆಲ್ಲರಿಗೂ ಸ್ಫೂರ್ತಿ ಎಂದು ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಸ್ವಾತಂತ್ರ ಅಮೃತ ಮಹೋತ್ಸವ ಪ್ರಯುಕ್ತ ಸೋಮವಾರ ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕಾಗಿ ಜೀವ ಬಲಿದಾನ ಮಾಡಿದ ಹೋರಾಟಗಾರರಿಂದ ಸ್ಫೂರ್ತಿಗೊಂಡು ನಾವೆಲ್ಲರೂ ದೇಶಕ್ಕಾಗಿ ಸೇವೆ ಮಾಡುವ ಸಂಕಲ್ಪ ಮಾಡಬೇಕು. ದೇಶ ನಮಗೆ ಏನು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂದು ಆಲೋಚಿಸಬೇಕು. ದೇಶದ ಅಭಿವೃದ್ಧಿ ಪಥದಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಎಂದು ತಿಳಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ವಿಶೇಷವಾಗಿ ರಕ್ತದಾನ ಶಿಬಿರ ಆಯೋಜಿಸಿದ್ದು, 108 ಜನರು ರಕ್ತದಾನ ಮಾಡುವುದರ ಮುಖಾಂತರ ಅರ್ಥಪೂರ್ಣವಾಗಿ ಸ್ವಾತಂತ್ರö್ಯ ದಿನ ಆಚರಿಸಲಾಯಿತು. ಎಲ್ಲ ಸಂಘ ಸಂಸ್ಥೆಗಳ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ತಾಲೂಕು ಘಟಕ, ಅಕ್ಕನ ಬಳಗ, ಯುವ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಸಹ್ಯಾದ್ರಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.

ಸ್ಪಂದನ ಹೆಲ್ತ್ ಫೌಂಡೇಷನ್‌ನ ನವೀನ್, ಬಸವ ಕೇಂದ್ರದ ಬೆನಕಪ್ಪ, ಚಂದ್ರಪ್ಪ, ಚಂದ್ರಶೇಖರ ತೆಲಗಿನಹಾಳ, ಶಿವಯೋಗಿ ಹಂಚಿನಮನೆ, ನಾಗರಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್‌ಕುಮಾರ್, ಬಾರಂದೂರು ಪ್ರಕಾಶ್, ಆರ್.ಎಸ್.ಸ್ವಾಮಿ, ಹಾಲಸ್ವಾಮಿ, ಧೃವಕುಮಾರ್, ರಾಜಶೇಖರ್, ಎಸ್.ಎಸ್.ಜ್ಯೋತಿಪ್ರಕಾಶ್, ಡಾ. ಪರಿಸರ ನಾಗರಾಜ್, ಜಗದೀಶ್, ಧರಣೇಂದ್ರ ದಿನಕರ್, ಡಾ. ದಿನೇಶ್ ಮತ್ತಿತರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…