ಪ್ರಧಾನಮಂತ್ರಿಗಳಾದ ನಂತರ ದೇಶದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಹಾಗೂ ಅಗತ್ಯವಾಗಿರುವ ಸೇವೆಗಳನ್ನು ಒದಗಿಸುವ ಯೋಜನೆಗಳ ಅನುಷ್ಠಾನಕ್ಕೆ ಹಿಂದೆಂದಿಗಿಂತ ಹೆಚ್ಚಿನ ವೇಗ ನೀಡಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ಹಾಗೂ ಅಲಿಮ್ಕೋ ಸಂಸ್ಥೆಯ ಸಹಯೋಗದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ-ಸಲಕರಣೆಗಳ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ರೀತಿಯ ಕಾರ್ಯಕ್ರಮಗಳು ದೇಶದೆಲ್ಲೆಡೆ ಭರದಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದ ಅವರು, ಈ ಮಹತ್ವದ ಕಾರ್ಯಕ್ರಮದ ಅನುಷ್ಠಾನದಲ್ಲಿ ಹಲವು ದಶಕಗಳ ಸಾಮಾಜಿಕ ವಲಯದ ಸೇವಾ ಇತಿಹಾಸ ಹೊಂದಿರುವ ಅಲಿಮ್ಕೊ ಸಂಸ್ಥೆಯು ಸಹಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಸ್ತುತ ೧೦೨೦ಕ್ಕೂ ಹೆಚ್ಚಿನ ವಿಕಲಚೇತನರಿಗೆ ಸುಮಾರು ೭೫ಲಕ್ಷ ಮೌಲ್ಯದ ವೀಲ್‌ಚೇರ್, ಕ್ಯಾಲಿಪರ್ಸ್, ಶ್ರವಣೇಂದ್ರಿಯ, ಅಂಧರಿಗೆ ಅಗತ್ಯವಾಗಿರುವ ಬ್ಲೆöÊಂಡ್ ಮೊಬೈಲ್ ಇತ್ಯಾದಿ ಸಾಧನ-ಸಲಕರಣೆಗಳನ್ನು ಉಚಿತವಾಗಿ ವಿತರಿಸುತ್ತಿರುವುದು ವಿಕಲಾಂಗರಿಗೆ ಸಮಾಧಾನ ತರಲಿದೆ ಎಂದರು.
ದೇಶದ ಈಶಾನ್ಯ ರಾಜ್ಯಗಳ ಸರ್ವಾಂಗೀಣ ವಿಕಾಸಕ್ಕೆ ಸಂಕಲ್ಪ ಮಾಡಿದ ಕೇಂದ್ರ ಸರ್ಕಾರವು ಪರ್ವತಮಾಲ ಎಂಬ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರ ಪರಿಣಾಮವಾಗಿ ಈಶಾನ್ಯ ರಾಜ್ಯಗಳಲ್ಲಿ ರಸ್ತೆ, ಆರೋಗ್ಯ, ಶಿಕ್ಷಣ ಮುಂತಾದ ಸೇವೆಗಳಲ್ಲಿ ವಿಶೇಷ ಪ್ರಗತಿ ಸಾಧಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ತಮ್ಮದಲ್ಲದ ತಪ್ಪಿಗೆ ಸಂಕಷ್ಟ ಅನುಭವಿಸುತ್ತಿರುವ ವಿಕಲಾಂಗರ ನೆಮ್ಮದಿಯ ಬದುಕಿಗೆ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿದ್ದು, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲಾಗದಿರುವ ಮನುಷ್ಯ ನಿಜವಾಗಿಯೂ ಅಂಗವಿಕಲ ಎಂದ ಅವರು, ವಿಕಲಾಂಗರಲ್ಲೂ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಪ್ರಾವಿಣ್ಯತೆ ಪಡೆದವರಿದ್ದಾರೆ. ಯಾವುದೇ ಅತಂಕ ಪಡದೆ, ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ನೆಮ್ಮದಿಯ ಜೀವನಕ್ಕೆ ಮುಂದಾಗಬೇಕೆಂದವರು ನುಡಿದರು.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೨ನೇ ಹುಟ್ಟುಹಬ್ಬದ ಅಂಗವಾಗಿ ದೇಶದ ೭೨ಸ್ಥಳಗಳಲ್ಲಿ ಅಚರಿಸುತ್ತಿರುವ ವಿಶೇಷ ಕಾರ್ಯಕ್ರಮ ಇದಾಗಿದ್ದು, ದಕ್ಷಿಣ ಭಾರತ ಏಕೈಕ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆ. ಸಾರ್ವಜನಿಕ ಕ್ಷೇತ್ರದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಪ್ರತಿಯೊಬ್ಬರೂ ಅಗತ್ಯವುಳ್ಳವರ ನೆರವಿಗೆ ಧಾವಿಸಬೇಕು. ಈ ನೆರವಿನಿಂದ ದೊರೆಯುವ ತೃಪ್ತಿ ಮತ್ತು ಮಾನಸಿಕ ನೆಮ್ಮದಿ ಅವರ್ಣನೀಯ. ಸೇವೆ ಎಂಬುದು ಕೇವಲ ಕಾಲಾವಧಿಗೆ ಸೀಮಿತವಲ್ಲ. ಅದು ನಿರಂತರವಾಗಿರಬೇಕು. ಮನುಮುಟ್ಟುವಂತಿರಬೇಕು. ಈ ಎಲ್ಲಾ ವಿಷಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದೀಜಿಯವರ ಇಚ್ಚಾಶಕ್ತಿಯಿಂದಾಗಿ ದೇಶದ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ವಿಶ್ವದಲ್ಲಿ ಭಾರತಕ್ಕೆ ಗೌರವಯುತ ಸ್ಥಾನ ಪ್ರಾಪ್ತಿಯಾಗಿದೆ. ಅಂತೆಯೇ ಜಿಲ್ಲೆಯಲ್ಲಿಯೂ ರಸ್ತೆ, ಸೇತುವೆ, ರೈಲು, ವಿಮಾನ ನಿಲ್ದಾಣ, ಮೂಲಭೂತ ಸೌಕರ್ಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಪ್ರಗತಿ ಕಾಣಬಹುದಾಗಿದೆ ಎಂದ ಅವರು, ಜಿಲ್ಲೆಯ ೪.೫೦ಲಕ್ಷ ಜನ ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ನೇರ ಫಲಾನುಭವಿಗಳಾಗಿದ್ದಾರೆ ಎಂದರು.
- ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ. ಜನಪರ ಯೋಜನೆಗಳ ಅನುಷ್ಠಾನದಿಂದಾಗಿ ಜನಸಾಮಾನ್ಯರ ನೆಮ್ಮದಿಯ ಬದುಕು ಸಾಧ್ಯವಾಗಿದೆ. ವಿಕಲಚೇತನರ ನೆಮ್ಮದಿಯ ಬದುಕಿಗೆ ಸರ್ಕಾರದೊಂದಿಗೆ ಸಾರ್ವಜನಿಕರು ನೆರವು ಒದಗಿಸಬೇಕು. _ ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯರು.
- ಸಂಸದ ಬಿ.ವೈ.ರಾಘವೇಂದ್ರ ಅವರು ಅವಿರತ ಶ್ರಮದಿಂದಾಗಿ ಜಿಲ್ಲೆಯ ೧೦೨೦ಕ್ಕೂ ಹೆಚ್ಚಿನ ವಿಕಲಚೇತನರಿಗೆ ಸಾಧನ-ಸಲಕರಣೆ ಒದಗಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ. ಅದಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ದೂರದೃಷ್ಟಿಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು – ಆರ್.ರುದ್ರೇಗೌಡರು, ವಿಧಾನಪರಿಷತ್ ಸದಸ್ಯರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ್.ರುದ್ರೇಗೌಡ, ಡಿ.ಎಸ್.ಅರುಣ್, ಅಲಿಮ್ಕೋ ಸಂಸ್ಥೆಯ ಹಿರಿಯ ಅಧಿಕಾರಿ ಅಶೋಕ್, ದತ್ತಾತ್ರಿ, ಜ್ಯೋತಿಪ್ರಕಾಶ್, ಮೇಘರಾಜ್, ಸೂಡಾ ಅಧ್ಯಕ್ಷ ನಾಗರಾಜ್, ಮಾಲತೇಶ್, ಬಳ್ಳೆಕೆರೆ ಸಂತೋಷ್, ಶಂಕರ್‌ಗನ್ನಿ, ಮಾಲತೇಶ್, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಎನ್.ಡಿ.ಪ್ರಕಾಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.