ಶಿವಮೊಗ್ಗ: ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಮತ್ತು ರೋಟರಿ ವಲಯ 11ರ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಅಕ್ಟೋಬರ್ 16ರಂದು ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ( ವಸುಂಧರೆ 2022 ) ಹಮ್ಮಿಕೊಳ್ಳಲಾಗಿದೆ ಎಂದು ಪ್ರಿಸರ್ವ್ ಪ್ಲಾನೆಟ್ ಅರ್ಥ್ ಅಧ್ಯಕ್ಷ ವಸಂತ್ ಹೋಬಳಿದಾರ್ ಹೇಳಿದರು.
ಪರಿಸರ ಸಂರಕ್ಷಣೆ, ಪ್ರಕೃತಿ ವಿರೋಧಿ ಕೃತ್ಯಗಳನ್ನು ಅರಿತುಕೊಳ್ಳಲು, ಅಂತರ್ಜಲ ಜಾಗೃತಿ, ಜಾಗತಿಕ ತಾಪಮಾನ ಏರಿಕೆ ಪರಿಣಾಮ ಮತ್ತು ಪರಿಹಾರ ಚರ್ಚೆ ಕುರಿತು ವಿಶೇಷ ಸಂವಾದ ಏರ್ಪಡಿಸಲಾಗಿದೆ. ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶವನ್ನು ಅಕ್ಟೋಬರ್ 16ರ ಬೆಳಗ್ಗೆ 9.30ಕ್ಕೆ ಇಕೋ ವಾಚ್ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಸುರೇಶ್ ಹೆಬ್ಳಿಕರ್ ಉದ್ಘಾಟಿಸುವರು. ಸರ್ಜಿ ಗ್ರೂಪ್‌ನ ಡಾ. ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅಧ್ಯಕ್ಷತೆ ವಹಿಸುವರು ಎಂದರು.
ಜಲ ಸಾಕ್ಷರತೆಗೆ ಚಿಂತನ ಬಿಂದುಗಳು ವಿಷಯ ಕುರಿತು ಡಾ. ನಾರಾಯಣ ಶೆಣೈ, ಜಾಗತಿಕ ತಾಪಮಾನ ಏರಿಕೆ ಪರಿಣಾಮ ಮತ್ತು ಪರಿಹಾರ ವಿಷಯ ಕುರಿತು ಅನಿಲ್ ಕುಮಾರ್ ನಾಡಿಗೇರ್ ಹಾಗೂ ವನ್ಯಜೀವಿ ಆವಾಸಸ್ಥಾನ ಮತ್ತು ಅದರ ಮಹತ್ವ ಕುರಿತು ಅಖಿಲೇಶ್ ಚಿಪ್ಪಳಿ ಉಪನ್ಯಾಸ ನೀಡುವರು ಎಂದು ಹೇಳಿದರು.
ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ಸಂದರ್ಭದಲ್ಲೀ “ಜಲ ಸಾಕ್ಷರತೆಗೆ ಚಿಂತನ ಬಿಂದುಗಳು” ಪುಸ್ತಕ ಬಿಡುಗಡೆ, ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಪರಿಸರ ಜಾಗೃತಿ ಜಾಥಾ, ಸರ್ಜಿ ಆಸ್ಪತ್ರೆ ವತಿಯಿಂದ ರೋಟರಿ ಸದಸ್ಯರಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಜಿ.ವಿಜಯಕುಮಾರ್, ಚಂದ್ರಹಾಸ ಪಿ ರಾಯ್ಕರ್, ವೀರಣ್ಣ ಹುಗ್ಗಿ, ಸುಮತಿ ಕುಮಾರಸ್ವಾಮಿ, ಕೆ.ಪಿ.ಶೆಟ್ಟಿ, ಸತೀಶ್ ಚಂದ್ರ ಹಾಜರಿದ್ದರು.