ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2022 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿರುವ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಅಕ್ಟೋಬರ್ 31 ರೊಳಗೆ ಪಾವತಿಸುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಕೃಷಿ ವಿಮೆ ಕಂಪೆನಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಕೃಷಿ ಅಧಿಕಾರಿಗಳು ಮತ್ತು ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ. ಅಧಿಕಾರಿಗಳೊಂದಿಗೆ ವೈಯಕ್ತಿಕ ಬೆಳೆ ವಿಮೆ ಪಾವತಿ ಕುರಿತು ಚರ್ಚಿಸಿದ ಅವರು, ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ಪರಿಹಾರವನ್ನು ಶೀಘ್ರದಲ್ಲಿ ಪಾವತಿಸುವಂತೆ ಈ ಹಿಂದೆಯೇ ವಿಮಾ ಕಂಪೆನಿಗೆ ಸೂಚಿಸಲಾಗಿತ್ತು. ತಾಂತ್ರಿಕ ಮತ್ತಿತರೆ ಏನೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಂಡು, ವಿಮೆ ಅರ್ಜಿಗಳನ್ನು ಇತ್ಯರ್ಥಪಡಿಸಿ ಅಕ್ಟೋಬರ್ 31 ರೊಳಗೆ ರೈತರಿಗೆ ವಿಮಾ ಮೊತ್ತವನ್ನು ಪಾವತಿಸುವಂತೆ ಸೂಚಿಸಿದರು.

ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, 2022 ರ ಮುಂಗಾರು ಹಂಗಾಮಿಗೆ ಇದುವರೆಗೆ ಜಿಲ್ಲೆಯಲ್ಲಿ ಸುಮಾರು 31 ಸಾವಿರ ಅರ್ಜಿಗಳು ಬಂದಿದ್ದು, ಮಧ್ಯಂತರ ಅವಧಿಗೆ 12038 ರೈತರು ಸುಮಾರು ರೂ. 13.80 ಕೋಟಿ ವಿಮೆ ಮೊತ್ತ ಪಡೆಯಲು ಅರ್ಹರಾಗಿದ್ದಾರೆ. ಈ ಮೊತ್ತವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ವಿಮಾ ಕಂಪೆನಿಗೆ ಕೋರಲಾಗಿದೆ ಎಂದರು.
ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ.ನ ಉಪ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಮಾತನಾಡಿ, ಸಂರಕ್ಷಣ್ ತಂತ್ರಾಂಶದಲ್ಲಿ ರೈತರ ವಿಮೆಯ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ವಿಮೆ ಮೊತ್ತವನ್ನು ಅರ್ಹ ರೈತರ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಬಸವರಾಜ್, ತಾಲ್ಲೂಕುಗಳ ಕೃಷಿ ಸಹಾಯಕ ನಿರ್ದೇಶಕರು, ವಿಮಾ ಕಂಪೆನಿ ಜಿಲ್ಲಾ ವ್ಯವಸ್ಥಾಪಕಿ ಪ್ರಿಯಾಂಕ ಇದ್ದರು.

ವರದಿ ಪ್ರಜಾಶಕ್ತಿ…