ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ 2022-23 ನೇ ಸಾಲಿನ ಬಜೆಟ್ ನಲ್ಲಿ ರೈತರ ಬೇಡಿಕೆಯಂತೆ ಯಶಸ್ವಿನಿ ಆರೋಗ್ಯ ವಿಮೆಯನ್ನು ಮರು ಜಾರಿಗೆ ಕೊಡುವುದಾಗಿ ಘೋಷಿಸಿದ್ದು ಅದರಂತೆ ನವೆಂಬರ್ ಒಂದರಿಂದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅನುಷ್ಠಾನಗೊಳಿಸುತ್ತಿರುವುದಾಗಿ ತಿಳಿಸಿ ದಿನಾಂಕ: 03.10.2022 ರಂದು ಸರ್ಕಾರಿ ಆದೇಶವನ್ನು ಹೊರಡಿಸಿರುತ್ತಾರೆ.ಅಂದಿನಿಂದ ಯಶಸ್ವಿನಿ ಯೋಜನೆಯಡಿ ರೈತರ ಸದಸ್ಯತ್ವ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಲಿರುತ್ತದೆ.ಈ ಯೋಜನೆಯು ರಾಜ್ಯದ ರೈತ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ವಿಶೇಷ ಯೋಜನೆಯಾಗಿದ್ದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ 5 ಲಕ್ಷಕ್ಕೆ ನಿಗದಿಪಡಿಸಿದ್ದು ರಾಜ್ಯದ ಯಾವುದೇ ಯಶಸ್ವಿನಿ ನೆಟವರ್ಕ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ.
ಗ್ರಾಮೀಣ ಭಾಗದ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500/-ಗಳ ವಂತಿಕೆ ಮತ್ತು ನಗರ ಭಾಗದ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/-ಗಳ ವಂತಿಕೆ, ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ 20 ರಷ್ಟು ಹೆಚ್ಚುವರಿಯಾಗಿ ಪಾವತಿಸತಕ್ಕದ್ದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.ಜಿಲ್ಲೆಯ ರೈತರು ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರುತ್ತೇನೆ.ರೈತರ ಬಹುದಿನಗಳ ಬೇಡಿಕೆಯಂತೆ ಯಶಸ್ವಿನಿ ಯೋಜನೆಯನ್ನು ಮರುಜಾರಿ ನೀಡಿದ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಟಿ. ಸೋಮಶೇಖರ್ ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಶ್ರೀ ಎಂ.ಬಿ. ಚನ್ನವೀರಪ್ಪ
ನವರು ಹೇಳಿದರು.