ಶಿವಮೊಗ್ಗ: ಮಕ್ಕಳ ಕಾನೂನು ಹಕ್ಕುಗಳನ್ನು ಎಲ್ಲರೂ ಅನುಸರಿಸಬೇಕು. ಮಕ್ಕಳು ತಮಗೆ ಸಿಗುವ ಹಕ್ಕಿನಿಂದ ವಂಚಿತರಾಗಬಾರದು. ಮಕ್ಕಳು ಸಮಾಜದ ಆಸ್ತಿಯಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಗಮನ ವಹಿಸಬೇಕು ಎಂದು ರೋಟರಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು.

ರಾಜೇಂದ್ರನಗರದ ರೋಟರಿ ಪೂರ್ವ ಶಾಲೆ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಉತ್ತಮ ವ್ಯಕ್ತಿತ್ವ ಹೊಂದುವ ಜತೆಯಲ್ಲಿ ಸದೃಢ ಮನೋಭಾವ ಹಾಗೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಮಾರ್ಗದರ್ಶನ ನೀಡಬೇಕು. ಒಳ್ಳೆಯ ಸಂಸ್ಕಾರ ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು. ಇದು ಎಲ್ಲ ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದು ತಿಳಿಸಿದರು.
ಮಕ್ಕಳ ವೈದ್ಯ ಡಾ. ಹರ್ಷ ಶಾಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಮಾಹಿತಿ ನೀಡಿದರು. ಬಾಲ್ಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಜಾಗೃತಿ ವಹಿಸಬೇಕು.. ಆರೋಗ್ಯ ಕಾಳಜಿ ವಹಿಸುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಟ್ರಸ್ಟ್ ಖಜಾಂಚಿ ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳ ಮನಸ್ಸಿಗೆ ಅರಿವು ಆಗುವಂತೆ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸಿ ಪಾಲಕರು, ಶಿಕ್ಷಕರು ಪ್ರತಿಕ್ರಿಯಿಸಬೇಕು. ಸರಿಯಾದ ರೀತಿ ತಿಳವಳಿಕೆ ಮೂಡಿಸಬೇಕು ಎಂದು ತಿಳಿಸಿದರು.
ರೋಟರಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಅವರು ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಿದರು.
ಮಕ್ಕಳ ತಜ್ಞ ಡಾ. ಹರ್ಷ ಅವರಿಗೆ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್, ಜಂಟಿ ಕಾರ್ಯದರ್ಶಿ ನಾಗವೇಣಿ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ಪ್ರಾಚಾರ್ಯ ಆರ್.ಸೂರ್ಯನಾರಾಯಣ, ಎಸ್.ಜಯಶೀಲಬಾಯಿ, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಪಾರ್ವತಿ, ಕಾರ್ಯದರ್ಶಿ ಅಜಯ್, ಶಿಕ್ಷರಾದ ಪಾರ್ವತಿ, ಸೌಂದರ್ಯ, ತೇಜಾಬಾಯಿ, ರುಕ್ಕಯ್ಯ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…