ಶಿವಮೊಗ್ಗ: ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳ ಪರ ಧ್ವನಿಯಾಗಿ ವಿಧಾನ ಪರಿಷತ್‌ನಲ್ಲಿ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ 2021-22ನೇ ಸಾಲಿನ 39ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ವ್ಯಾಪಾರಸ್ಥರ ಪರ ಸದನದಲ್ಲಿ ಧ್ವನಿ ಹೇಳುವವರು ಯಾರೂ ಇಲ್ಲ ಎಂಬ ಕೂಗು ಇತ್ತು. ಆದರೆ ನನ್ನ ಅವಧಿಯಲ್ಲಿ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ನನ್ನ ಜೀವನದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ, ಉದ್ಯಮಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೆಚ್ಚುವಲ್ಲಿ ಕೈಗಾರಿಕಾ ಸಂಘ ಮಹತ್ತರ ಕಾರಣವಾಗಿದೆ. ರಾಜಕೀಯ ಜೀವನದಲ್ಲಿ ಹಂತ ಹಂತವಾಗಿ ಬೆಳೆಯಲು ಸಹ ಕಾರಣವಾಗಿದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದಶಿ ವಸಂತ್ ಹೋಬಳಿದಾರ್ ಮಾತನಾಡಿ, ಸಂಘದ ಎಲ್ಲರ ಪ್ರಯತ್ನದಿಂದ 2022ನೇ ಸಾಲಿನಲ್ಲಿ 41 ಹೊಸ ಅಜೀವ ಸದಸ್ಯರು ಹಾಗೂ 45 ಹೊಸ ಸಾಮಾನ್ಯ ಸದಸ್ಯರು ಸಂಘಕ್ಕೆ ಸೇರ್ಪಡೆಯಾಗಿದ್ದಾರೆ. ಒಟ್ಟು 264 ಅಜೀವ ಸದಸ್ಯರು, 572 ಸಾಮಾನ್ಯ ಸದಸ್ಯರು ಇದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟನೆ ಬಹಳ ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಸಂಘದ ಸದಸ್ಯರಾಗಬೇಕು. ಎಲ್ಲ ಸದಸ್ಯರ ಸಹಕಾರದಿಂದ ಸಂಘವು ಅತ್ಯಂತ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಖಜಾಂಚಿ ಮಧುಸೂದನ್ ಐತಾಳ್, ನಿರ್ದೇಶಕರಾದ ಜಗದೀಶ್ ಮಾತನವರ್, ಬಿ.ಮಂಜೇಗೌಡ, ಮರಿಸ್ವಾಮಿ, ಇ.ಪರಮೇಶ್ವರ್, ಗಣೇಶ್ ಎಂ.ಅಂಗಡಿ, ಕೆ.ಎಸ್.ಸುಕುಮಾರ್, ಪ್ರದೀಪ್ ಯಲಿ, ವಿಶೇಷ ಆಹ್ವಾನಿತರಾದ ಶರತ್ ಎಸ್.ಭೂಪಾಳಂ, ರಮೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ಕೆ.ವಿ.ವಸಂತ್‌ಕುಮಾರ್, ಪಿ.ಸಿ.ಹಾಲಸ್ವಾಮಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ವರದಿ ಪ್ರಜಾಶಕ್ತಿ…