ಶಿವಮೊಗ್ಗ: ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮತ್ತು ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಎಕೆ ಎಡುಸ್ಯಾಟ್ ಗ್ಲೋಬಲ್ ಅಂಬಾಸಿಡರ್ ಡಾ. ಶಶಿಧರ್ ಹೇಳಿದರು.

ಎಪಿಜೆ ಅಬ್ದುಲ್ ಕಲಾಂ ಅವರ ಎಕೆ ಎಡುಸ್ಯಾಟ್ ವತಿಯಿಂದ ಆಯೋಜಿಸಿದ್ದ ನಿಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಕಲಿತ ವಿಷಯಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ರೋಟರಿ ಜಿಲ್ಲೆ 3182 ರಲ್ಲಿ ಅಂತರಿಕ್ಷ ಸಂಬಂಧಿ ವಿಷಯಗಳ ಬಗ್ಗೆ ನಿಬಂಧ ಸ್ಪರ್ಧೆ ನಡೆಸಲಾಗಿತ್ತು. ರೋಟರಿ ಶಿವಮೊಗ್ಗ ಪೂರ್ವದ ವಾರದ ಸಭೆಯಲ್ಲಿ ನಿಬಂಧ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಗೆದ್ದ 9 ವಿಜೇತರಿಗೆ 13,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಬಹುಮಾನ ವಿತರಿಸಲಾಯಿತು.

ರೋಟರಿ ಜಿಲ್ಲೆಯ ಎಕೆ ಎಡುಸ್ಯಾಟ್ ಚೇರ‍್ಮನ್ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, ನಿಬಂಧ ಸ್ಪರ್ಧೆಯನ್ನು ಎಪಿಜೆ ಅಬ್ದುಲ್ ಕಲಾಂ 91ನೇ ವಾರ್ಷಿಕೋತ್ಸವ ಸ್ಮರಣೆಗಾಗಿ ನಡೆಸಲಾಯಿತು. ಎಪಿಜೆ ಅಬ್ದುಲ್ ಕಲಾಂ ಅವರ ಇಂಟರ್ ನ್ಯಾಷನಲ್ ಫೌಂಡೇಷನ್ ಫೆಬ್ರವರಿ 19ರಂದು 150 ಪೈಕೋ ಸೆಟಲೈಟ್ ಗಳನ್ನು ತಮಿಳುನಾಡಿನ ಕಾಂಚಿಪುರ ಜಿಲ್ಲೆಯ ಪುಟ್ಟಿ ಪುಲಮ್ ಹಳ್ಳಿಯಿಂದ ಹಾರಿ ಬಿಡಲಾಗುವುದು. ಬೆಂಗಳೂರಿನ ಇಸ್ರೋ ಸಹಕರಿಸಲಿದೆ. ಈ ಪೈಕೋ ಸೆಟಲೈಟ್ ಗಳನ್ನು ದೇಶದಾದಂತ ಆಯ್ಕೆಯಾದ 5000 ವಿದ್ಯಾರ್ಥಿ ವಿದ್ಯಾರ್ಥಿಯರನ್ನು ಉಚಿತವಾಗಿ ತರಬೇತಿಗೊಳಿಸಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ರೋಟರಿ ಜಿಲ್ಲೆಯ ಉಪ ಚೇರ‍್ಮನ್ ಎಚ್‌ಎನ್‌ಎಸ್ ರಾವ್ ಮಾತನಾಡಿ, ಕಲಾಂ ಸ್ಪೇಸ್ ಕ್ಲಬ್ ಗಳನ್ನು ಹೇಗೆ ಹುಟ್ಟು ಹಾಕಲಾಯಿತು ಮತ್ತು ಅವುಗಳ ಕಾರ್ಯಕ್ಷಮತೆಯ ಬಗ್ಗೆ ತಿಳಿಸಿದರು. ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಉಪಾಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಮಾಜಿ ಅಧ್ಯಕ್ಷ ಗಣೇಶ್, ಚಂದ್ರಶೇಖರಯ್ಯ, ಶ್ರೀಕಾಂತ್, ಅರುಣ್ ದೀಕ್ಷಿತ್, ಕೃಷ್ಣಮೂರ್ತಿ, ಡಾ ಶೇಖರ ಗೌಳೆರ್, ಇನ್ನರ್ ವ್ಹೀಲ್ ಅಧ್ಯಕ್ಷೆ ಮಧುರಾ ಮಹೇಶ್, ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…