ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರಾಜ್ಯೋತ್ಸವ ಕಲರವ, ಎಲ್ಲೆಲ್ಲೂ ಕನ್ನಡ ಗೀತೆಗಳ ರಿಂಗಣದ ಜೊತೆ ಪುನೀತ್ ನೆನೆದ ಮಲವಗೊಪ್ಪ ಭಗತ್ ಸಿಂಗ್ ಕನ್ನಡ ಯುವಕರ ಸಂಘದ ಸದಸ್ಯರು. ಶಿವಮೊಗ್ಗದ ಮಲವಗೊಪ್ಪದಲ್ಲಿ ರಾಜ್ಯೋತ್ಸವದ ಸಂಭ್ರಮ ಅದ್ದೂರಿಯಾಗಿದ್ದು, ರಸ್ತೆಗಳಲ್ಲ ಕನ್ನಡ ಬಾವುಟಗಳಿಂದ ತುಂಬಿದ್ದವು. ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ದಿವಂಗತ ಪುನೀತ್ ರಾಜ್ ಕುಮಾರ್ ಪುತ್ಥಳಿಯ ಅನಾವರಣ ಕೂಡ ಈ ವೇಳೆ ಮಾಡಲಾಯಿತು. ಗ್ರಾಮದ ಬೀದಿ ಬೀದಿಗಳಲ್ಲಿ ತಳಿರು ತೋರಣಗಳಿಂದ ಹಾಗೂ ಕನ್ನಡ ಬಾವುಟದಿಂದ ಅಲಂಕೃತಗೊಂಡಿದ್ದು ವಿಶೇಷ ವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಅಭ್ಯರ್ಥಿ ಪಲ್ಲವಿಯವರು ಆಗಮಿಸಿ ರಾಜ್ಯೋತ್ಸವ ತಂಡಕ್ಕೆ ಶುಭ ಹಾರೈಸಿದರು.

ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಮಕ್ಕಳು ಹಿರಿಯರು, ಕನ್ನಡ ಕಾರ್ಯಕರ್ತರಿಂದ ಮೆರವಣಿಗೆ ಏಕಕಾಲದಲ್ಲೇ ಮೇಳೈಸಿದವು. ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಘೋಷವಾಕ್ಯ ಮೊಳಗುವ ಮೂಲಕ ಅಕ್ಷರಶಃ ಇಡೀ ವೇದಿಕೆ ಕನ್ನಡಮಯವಾಗಿ ಮಾರ್ಪಟ್ಟಿತ್ತು. ಮೊದಲಿಗೆ ಮಲವಗೊಪ್ಪದ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಭಗತ್ ಸಿಂಗ್ ಕನ್ನಡ ಯುವಕರ ಸಂಘದ ಸದಸ್ಯರು, ಪುನೀತ್ ರಾಜ್ ಕುಮಾರ್ ಅವರ ಆಕರ್ಷಕ ಪುತ್ತಳಿಗೆ ಯುವಕರು ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವತೆ ಭಾವ ಚಿತ್ರದ ಜೋತೆ ಪುನೀತ್ ಪುತ್ಥಳಿಯ ಮೆರವಣಿಗೆ ನೆರವೇರಿಸಲಾಯಿತು. ಈ ವೇಳೆ ಭಜರಂಗಿ ಹನುಮಂತನ ಬೃಹತ್ ಕಟ್ ಔಟ್ ನ್ನು ಕೂಡ ಮೆರವಣಿಗೆಯಲ್ಲಿ ಬಳಸಲಾಯಿತು. ಮೆರವಣಿಗೆ ಉದ್ದಕ್ಕೂ ಆಕರ್ಷಕ ಡೊಳ್ಳು ಕುಣಿತ ನೆರವೇರಿತು.

ಇನ್ನು ಮೆರವಣಿಗೆಯಲ್ಲಿ ಕನ್ನಡ ಚಿತ್ರಗೀತೆಗಳಿಗೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ನಂತರ ಕಾರ್ಯಕ್ರಮದಲ್ಲಿ ಕನ್ನಡದ ಮಹಾನ್ ದಿಗ್ಗಜರ ಹಾಗೂ ಚೇತನರ ಫೋಟೋ ಪ್ರದರ್ಶನ ಹಾಗೂ ಅವರ ವ್ಯಕ್ತಿತ್ವಗಳ ಪರಿಚಯ ಮಾಡಿಕೊಡುವ ಕೆಲಸ ಈ ಕಾರ್ಯಕ್ರಮದಲ್ಲಿ ನಡೆಯಿತು. ಭಗತ್ ಸಿಂಗ್ ಹಾಗೂ ಪುನೀತ್ ರಾಜ್ ಕುಮಾರ್ ರವರ ಬೃಹತ್ ಕಟ್ ಔಟ್ ಕೂಡ ಆಕರ್ಷಣೀಯ ವಾಗಿತ್ತು. ಈ ವೇಳೆ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ಹಾಗೂ ಪುಸ್ತಕಗಳ ವಿತರಣೆ ಕೂಡ ಮಾಡಲಾಯಿತು. ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ಯುವಕರು ಕರೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಯುವಕರು ಗ್ರಾಮಸ್ಥರು ಉಪಸ್ಥಿತರಿದ್ದರು ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವನ್ನು ಭಗತ್ ಸಿಂಗ್ ಕನ್ನಡ ಯುವಕ ಸಂಘದ ಸದಸ್ಯರು ಅದ್ಧೂರಿಯಾಗಿ ಹಾಗೂ ಆರ್ಥ ಪೂರ್ಣವಾಗಿ ನೆರವೇರಿಸಿದರು.

ವರದಿ ಪ್ರಜಾಶಕ್ತಿ…