ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಯೋಜನೆಗಳಡಿ ಫಲಾನುಭವಿಗಳ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಸಿದ್ದಪಡಿಸಿ ಅನುಮೋದನೆ ಪಡೆಯಬೇಕು. ಇಲ್ಲವಾದಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2022-23 ನೇ ಸಾಲಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಡಿ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಇರುವ ಧನಶ್ರೀ ಯೋಜನೆ(ಹೆಚ್‍ಐವಿ ಸೋಂಕಿತ ಮಹಿಳೆಯರಿಗೆ), ದಮನಿತ ಮಹಿಳೆಯರಿಗೆ ಚೇತನ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಮತ್ತು ಉದ್ಯೋಗಿನಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಈಗಾಗಲೇ ತಡವಾಗಿದೆ. ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳು ಸಮರ್ಪಕವಾದ ಒಂದು ಪಟ್ಟಿಯನ್ನು ಇನ್ನೂ ತಯಾರಿಸಿಲ್ಲ. ವಿಳಂಬ ಮಾಡಿದ ಅಧಿಕಾರಿ/ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಇನ್ನು ಎರಡು ದಿನಗಳ ಒಳಗೆ ಸಮರ್ಪಕವಾದ ಪಟ್ಟಿ ತಯಾರಿಸಿ ತಮ್ಮ ಬಳಿ ಅನುಮೋದನೆ ಪಡೆಯಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ನಿಗಮದ ಈ ಯೋಜನೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ತಯಾರಿ ಸಂಬಂಧ ಸೂಕ್ತ ಪರಿಶೀಲನೆ ನಡೆಸಿ, ನಿರ್ದೇಶನ ನೀಡುವಂತೆ ತಿಳಿಸಿದ ಅವರು, ಇನ್ನೂ ವಿಳಂಬವಾದಲ್ಲಿ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ವಾಧಾರ ಗೃಹಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಮರ್ಪಕವಾಗಿ ಆಪ್ತಸಮಾಲೋಚನೆ ನಡೆಸಿ, ಅವರವರ ಕುಟುಂಬಗಳಿಗೆ ಸೇರ್ಪಡೆಗೊಳಿಸಬೇಕು. ಹಾಗೂ ಕಾಣೆಯಾದ ಪ್ರಕರಣಗಳಲ್ಲಿನ ಮಹಿಳೆಯರು ಮತ್ತು ಮಕ್ಕಳ ಆಧಾರ್ ಕಾರ್ಡ್ ಮೂಲಕ ಅವರ ವಿಳಾಸ ಪತ್ತೆ ಮಾಡಿ ಅವರ ಸ್ಥಳ, ಕುಟುಂಬಕ್ಕೆ ಸೇರಿಸುವ ಪ್ರಯತ್ನ ಮಾಡಬೇಕು ಎಂದ ಅವರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಸ್ವಾಧಾರ ಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಯಾವುದೇ ವಿಳಂಬವಿಲ್ಲದೆ ನೇಮಕಾತಿ ಮಾಡುವಂತೆ ಸೂಚಿಸಿದ ಅವರು ಮಾತೃಪೂರ್ಣ, ಪ್ರಧಾನಮಂತ್ರಿ ಮಾತೃವಂದನಾ ಮತ್ತು ಪೋಷಣ್ ಅಭಿಯಾನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವಂತೆ ತಿಳಿಸಿದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿನ ಎನ್‍ಆರ್‍ಸಿ(ನ್ಯುಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್)ಗೆ ವಾರಕ್ಕೊಮ್ಮೆ ಭೇಟಿ ನೀಡಿ ಎಂಎಎಂ(ಮಾಡರೇಟ್ ಅಕ್ಯೂಟ್ ಮಾಲ್‍ನ್ಯುಟ್ರಿಷನ್) ಎಸ್‍ಎಎಂ (ಸಿವಿಯರ್ ಅಕ್ಯುಟ್ ಮಾಲ್‍ನ್ಯುಟ್ರಿಷನ್) ಮಕ್ಕಳ ಕುರಿತು ಪರಿಶೀಲನೆ ನಡೆಸಬೇಕು ಎಂದರು.
ಸ್ವಾಧಾರ ಗೃಹಗಳಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರು, ಹೆಚ್‍ಐವಿ ಸೋಂಕಿತರು ಹಾಗೂ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ನೊಂದಣಿ ಮಾಡಿಸಿ, ಮತದಾರರ ಚೀಟಿ ಪಡೆಯುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ, ತಾಲ್ಲೂಕುಗಳ ಸಿಡಿಪಿಓ ಗಳು, ಸಂರಕ್ಷಣಾಧಿಕಾರಿಗಳು, ಸ್ವಾಧಾರ ಕೇಂದ್ರಗಳ ಅಧಿಕಾರಿಗಳು, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.