ಶಿವಮೊಗ್ಗದ ಲಕ್ಷ್ಮೀ ಚಿತ್ರಮಂದಿರ ಹತ್ತಿರ ಮಲೆ ಮಾದೇಶ್ವರ ದೇವಾಲಯದ ಬಳಿ ನಿರಾಶ್ರಿತ ವೃದ್ಧೆಯೋರ್ವರನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಕ್ಷಿಸಿ ವಿನೋಬ ನಗರದ ‘ಶ್ರೀ ಕಾಲಭೈರವೇಶ್ವರ ವೃದ್ದಾಶ್ರಮ’ಕ್ಕೆ ಸೇರಿಸಿದ್ದಾರೆ.
ನಿರಾಶ್ರಿತ ಹಿರಿಯ ನಾಗರಿಕ ಮುತ್ತು ರತ್ನಮ್ಮ ಎಂಬವರು ಸುಮಾರು ನಾಲ್ಕೈದು ದಿನಗಳಿಂದ ದೇವಸ್ಥಾನದ ಬಳಿ ಕಾಣಿಸಿಕೊಂಡಿದ್ದು, ಸಾರ್ವಜನಿಕರು ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ-14567ಕ್ಕೆ ಕರೆಮಾಡಿ ಮಾಹಿತಿ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶೀಲ್ಪಾ.ಎಂ ದೊಡ್ಡಮನಿ ಅವರ ಸೂಚನೆಯ ಮೇರೆಗೆ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಶಿವಮೊಗ್ಗದ ಕ್ಷೇತ್ರ ನಿರ್ವಹಣಾ ಅಧಿಕಾರಿ ತಿಲಕ್ ರಾಜ್ ಹಾಗೂ ರಾಜ್ಯ ಹಿರಿಯ ನಾಗರಿಕರ ಸಹಾಯವಾಣಿ ಡಿವೈಎಸ್ಪಿ ಕಚೇರಿ ಶಿವಮೊಗ್ಗದ ಆಪ್ತ ಸಮಾಲೋಚಕ ಯುವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ನಿರಾಶ್ರಿತ ವೃದ್ಧೆಯನ್ನು ಇಲಾಖೆಯಡಿ ಅನುದಾನ ಪಡೆಯುತ್ತಿರುವ ವಿನೋಬ ನಗರದ ‘ಶ್ರೀ ಕಾಲಭೈರವೇಶ್ವರ ವೃದ್ದಾಶ್ರಮ’ಕ್ಕೆ ಸೇರಿಸಲಾಯಿತು. ಹಿರಿಯ ನಾಗರಿಕ ವೃದ್ಧೆಯ ಸಂಬಂಧಿತ ವ್ಯಕ್ತಿಗಳು ಯಾರಾದರೂ ಇದ್ದಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ-14567 ಅಥವಾ ರಾಜ್ಯ ಹಿರಿಯ ನಾಗರಿಕರ ಸಹಾಯವಾಣಿ 1090ಗೆ ಕರೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.