ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಸರ್ವ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುವುದರೊಂದಿಗೆ, ಕೋವಿಡ್ ನಿಯಂತ್ರಣ ಕ್ರಮಗಳು, ಕೋವಿಡ್ ಲಸಿಕಾಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ಎಸ್.ಸೆಲ್ವಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕೇಂದ್ರಿತ ಪ್ರದೇಶಗಳಲ್ಲಿ ಐಎಲ್‍ಐ, ಸಾರಿ(ಎಸ್‍ಎಆರ್‍ಐ) ಪ್ರಕರಣಗಳನ್ನು ಕೋವಿಡ್ ಪರೀಕ್ಷೆ ಒಳಪಡಿಸಬೇಕು. ಹಾಗೂ ಎಲ್ಲರೂ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಪ್ರತಿ ದಿನ 80 ರಿಂದ 100 ಜನರ ಕೊರೊನೊ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ 240 ಪರೀಕ್ಷೆಗಳನ್ನು ನಡೆಸಲಾಗಿದೆ. 02 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಒಂದು ಪ್ರಕರಣ ಅಂತರಾಷ್ಟ್ರೀಯ ಟ್ರಾವೆಲ್ ಹಿಸ್ಟರಿಯದ್ದಾಗಿದೆ. ಜಿಲ್ಲೆಯಲ್ಲಿ 108 ಆಂಬುಲೆನ್ಸ್ 24, ನಗುಮಗು 07, ಜೆಎಸ್‍ವಿ 31 ಸೇರಿ ಒಟ್ಟು 60 ಆಂಬುಲೆನ್ಸ್ ಇವೆ. ತಾಲ್ಲೂಕುಗಳಲ್ಲಿ 6 ಕೆಎಲ್ ಸಾಮಥ್ರ್ಯದ ಆಕ್ಸಿಜನ್ ಪ್ಲಾಂಟ್‍ಗಳು, ಐಸಿಯು ಬೆಡ್‍ಗಳು ಇವೆ. ಸಿಮ್ಸ್‍ನಲ್ಲಿ 90 ಐಸಿಯು ಬೆಡ್ ಮತ್ತು 52 ಕೆಎಲ್ ಸಾಮಥ್ರ್ಯದ ಆಕ್ಸಿಜನ್ ಪ್ಲಾಂಟ್ ಇದೆ.
ಈವರೆಗೆ ಜಿಲ್ಲೆಯಲ್ಲಿ 12 ರಿಂದ 14 ವಯಸ್ಸಿನವರಿಗೆ ಕೋವಿಡ್ ಲಸಿಕೆ ಮೊದಲನೇ ಡೋಸ್ ಶೇ.110 ಮತ್ತು ಎರಡನೇ ಡೋಸ್ ಶೇ.86 ನೀಡಲಾಗಿದೆ. 15 ರಿಂದ 17 ವಯಸ್ಸಿನವರಿಗೆ ಮೊದಲನೇ ಡೋಸ್ ಶೇ.86, ಎರಡನೇ ಡೋಸ್ ಶೇ.97, 18+ ಮೊದಲನೇ ಡೋಸ್ 102, ಎರಡನೇ ಡೋಸ್ ಶೇ.99.9 ಹಾಗೂ ಮುನ್ನೆಚ್ಚರಿಕೆ ಡೋಸ್ ಶೇ.16.0 ನೀಡಲಾಗಿದ್ದು, ಮುನ್ನೆಚ್ಚರಿಕೆ ಡೋಸ್ ಶೇ.100 ಸಾಧನೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಗೋವುಗಳ ಚರ್ಮಗಂಟು ರೋಗದ ಲಸಿಕಾಕರಣ ನಡೆಯುತ್ತಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 5829 ಜಾನುವಾರುಗಳಿಗೆ ವಿಮೆ ಮಾಡಿಸಲಾಗಿದೆ. ಶೇ.84 ಕೃತಕ ಗರ್ಭಧಾರಣೆ, ಶೇ.101 ಕೋಳಿಗಳ ಕೊಕ್ಕರೆ ರೋಗದ ವಿರುದ್ದ ಲಸಿಕೆ ಹಾಕಲಾಗಿದೆ. 164889 ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಲಾಗಿದೆ. 486601 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು 18 ವಾರಗಳಿಗೆ ಆಗುವಷ್ಟು ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1 ರಿಂದ ನವೆಂಬರ್ 30 ವರೆಗೆ ಜಿಲ್ಲೇಯಲ್ಲಿ ಸರಾಸರಿ 2410 ಮಿ.ಮೀ ಮಳೆಯಾಗಿದೆ. 2022 ರ ಮುಂಗಾರು ಹಂಗಾಮಿನಲ್ಲಿ 79602 ಹೆ. ಭತ್ತದ ಗುರಿ ಇದ್ದು 79131 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. 46877 ಹೆ. ಮುಸಿಕಿನ ಜೋಳ, 742 ಹೆ. ನಲ್ಲಿ ಏಕದಳ(ರಾಗಿ & ಜೋಳ), 353 ಹೆ. ಪ್ರದೇಶದಲ್ಲಿ ದ್ವಿದಳ ಧಾನ್ಯ ಮತ್ತು 1127 ಹೆ.ನಲ್ಲಿ ವಾಣಿಜ್ಯ ಬೆಳೆ ಬೆಳೆಯಲಾಗಿದೆ. ಏಪ್ರಿಲ್‍ನಿಂದ ನವೆಂಬರ್ ವರೆಗೆ 121390 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, 132662 ಮೆ.ಟನ್ ಗೊಬ್ಬರ ವಿತರಣೆಯಾಗಿದ್ದು, 25165 ಮೆ.ಟನ್ ದಾಸ್ತಾನಿದೆ. ಶೇ.81 ರಷ್ಟು ಬೀಜ ವಿತರಣೆ ಹಾಗೂ ಶೇ.80.09 ರಷ್ಟು ಔಷಧ ವಿತರಣೆಯಾಗಿದೆ ಎಂದು ಮಾಹಿತಿ ನೀಡಿದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, 2020-21 ಮತ್ತು 2021-22 ರಲ್ಲಿ ನರೇಗಾ ಯೋಜನೆಯಡಿ ಒಟ್ಟು 133 ಶಾಲೆಗಳಿಗೆ ಕೊಠಡಿಗಳು ಮಂಜೂರಾಗಿದ್ದು ಇಲ್ಲಿಯವರೆಗೆ 66 ಕೊಠಡಿ ನಿರ್ಮಾಣ ಮುಗಿದಿದೆ. ಎಸ್‍ಡಿಪಿ ಯೋಜನೆಯಡಿ 5 ಶಾಲೆಗಳ ಕೊಠಡಿ ನಿರ್ಮಾಣ ಮತ್ತು 16 ಶಾಲೆಗಳ ಕೊಠಡಿ ದುರಸ್ತಿಗೆ ಮಂಜೂರಾತಿ ದೊರೆತಿದ್ದು 04 ಕೊಠಡಿಗಳು ಮಾತ್ರ ಪೂರ್ಣಗೊಂಡಿವೆ ಎಂದರು. ಉಸ್ತುವಾರಿ ಕಾರ್ಯದರ್ಶಿಗಳು, ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು. ಕೆಆರ್‍ಐಡಿಎಲ್ ನವರು ಶಾಲಾ ಕೊಠಡಿ ಮತ್ತು ದುರಸ್ತಿ ಕೆಲಸವನ್ನು ಬೇಗ ಮುಗಿಸಿಕೊಡಬೇಕು ಎಂದು ಸೂಚಿಸಿದರು.
ಜಲಜೀವನ್ ಮಿಷನ್‍ಅಡಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಬ್ಯಾಚ್ 1, 2 ಮತ್ತು 3 ಕ್ಕೆ ಸಂಬಂಧಿಸಿದಂತೆ ಟೆಂಡರ್ ಆದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಸೂಚನೆ ನೀಡಿದ ಅವರು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು.
ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು ಈವರೆಗೆ 27,32,440 ಮಾನವ ದಿನಗಳನ್ನು ಪೂರೈಸಿ ಶೇ.91.08 ಭೌತಿಕ ಮತ್ತು ಶೇ.78.69 ಆರ್ಥಿಕ ಗುರಿ ಸಾಧಿಸಲಾಗಿದೆ ಎಂದರು.
ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಬಸವ ವಸತಿ ಯೋಜನೆಯಡಿ 6231 ಮನೆಗಳ ಗುರಿ ನೀಡಲಾಗಿದ್ದು, 5682 ಅರ್ಜ ಆಯ್ಕೆಯಾಗಿವೆ. ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ 1919 ಗುರಿ ಇದ್ದು 1432 ಅರ್ಜಿ ಆಯ್ಕೆಯಾಗಿವೆ ಎಂದರು. ಉಸ್ತುವಾರಿ ಕಾರ್ಯದರ್ಶಿಗಳು ಬಾಕಿ ಇರುವ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ವಿಲೇವಾರಿ ಮಾಡುವಂತೆ ತಿಳಿಸಿದರು.
ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೌಶಲ್ಯಾಭಿವೃದ್ದಿ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಸಬ್ಸಿಡಿ, ಸಾಲ ಸೌಲಭ್ಯ ಪಡೆಯುವ ಫಲಾನುಭವಿಗಳು ಮತ್ತು ವಸತಿ ಯೋಜನೆಯಡಿಯ ಫಲಾನುಭವಿಗಳಿಗೆ ಲೀಡ್ ಬ್ಯಾಂಕ್ ಮತ್ತು ಇತರೆ ಬ್ಯಾಂಕ್‍ಗಳು ಸಕಾಲದಲ್ಲಿ ಸೌಲಭ್ಯ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕೆಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳು, ಅಭಿವೃದ್ದಿ ನಿಗಮಗಳ ಪ್ರಗತಿ ಪರಿಶೀಲನೆ ನಡೆಸಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸುಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಸಿಇಓ ಎನ್.ಡಿ. ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.