ಶಿವಮೊಗ್ಗ: ಕಾಲುವೆ ಒತ್ತವರಿ ತೆರವುಗೊಳಿಸುವಂತೆ ಆಗ್ರಹಿಸಿ ವ್ಯಕ್ತಿಯೊಬ್ಬರು ಏಕಾಏಕಿ‌ ಗ್ರಾಮ ಪಂಚಾಯ್ತಿ ಕಚೇರಿ ಎದುರು ಉಪವಾಸ ಕುಳಿತ ಘಟನೆ ಇಂದು ಸಂಜೆ ತಾಲ್ಲೂಕಿನ ಮಂಡಘಟ್ಟ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.

ಮಂಡಘಟ್ಟದ ನಿವಾಸಿ ಉಮೇಶ್ ಅವರು ಕಳೆದ ನಾಲ್ಕು ವರ್ಷಗಳಿಂದ ರಾಜ ಕಾಲುವೆ ಒತ್ತುವರಿಯಾಗಿರುವುದರಿಂದ ತಮ್ಮ ಮನೆಗೆ ಮಳೆ ನೀರು ನುಗ್ಗುತ್ತಿದೆ. ಇದರಿಂದ ತಮಗೆ ಪ್ರತಿ ವರ್ಷ ಸಂಕಷ್ಟ ಎದುರಾಗುತ್ತಿದೆ. ಈ ಬಗ್ಗೆ ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ. ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳು ಜಿ.ಪಂ. ಸಿಇಓ ಎನ್.ಡಿ.ಪ್ರಕಾಶ್, ತಹಸೀಲ್ದಾರ್ ನಾಗರಾಜ್, ತಾ.ಪಂ. ಇ.ಓ ಅವಿನಾಶ್ ಅವರ ಗಮನ ಸೆಳೆಯಲಾಯಿತು.

ತಾ.ಪಂ. ಇ.ಓ. ಅವಿನಾಶ್ ಅವರು ಒಂದು ತಿಂಗಳಲ್ಲಿ ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇಲೆ ಉಮೇಶ್ ಪ್ರತಿಭಟನೆ ಹಿಂಪಡೆದರಲ್ಲದೆ, ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿದಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳದಲ್ಲಿ ಗ್ರಾ.ಪಂ. ಕಾರ್ಯದರ್ಶಿ ಮಧುಸೂದನ್, ಗ್ರಾಮಸ್ಥರು ಇದ್ದರು.
ಘಟನೆ ತಿಳಿದ ತಕ್ಷಣ ಜಿ.ಪಂ. ಸಿಇಓ ಎನ್.ಡಿ. ಪ್ರಕಾಶ್ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡಿದರು.

ವರದಿ ಪ್ರಜಾಶಕ್ತಿ…