ಕುಡ್ಲ ನ್ಯೂಸ್…

ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಯೋಜನೆ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ “ನೆರವು ” ಕಾರ್ಯಕ್ರಮ ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ 114 ವರ್ಷ ಪ್ರಾಯದ ಕರುನಾಡಿನ ಹೆಮ್ಮೆಯ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ, ಪದ್ಮಶ್ರೀ ಪುರಸ್ಕೃತ ಕಿತ್ತಳೆ ಹಣ್ಣು ಮಾರಿ ಜನರಿಗೆ ಶಿಕ್ಷಣ ನೀಡಬೇಕು ಎಂದು ಶಾಲೆಯನ್ನು ನಡೆಸಿದ ಹರೇಕಲ ಹಾಜಬ್ಬ,ಮತ್ತೊರ್ವ ಪದ್ಮಶ್ರೀ ಪುರಸ್ಕೃತ ನೀರಿಲ್ಲದ ಕೃಷಿ ಜಾಗಕ್ಕೆ ಸ್ವತಃ ತನ್ನ ಕೈಯಿಂದ ಗುಡ್ಡ ಕೊರೆದು ಕೊಳವೆ ಮುಖಾಂತರ ನೀರನ್ನು ತಂದು ಕೃಷಿ ಮಾಡಿದ ಆಮೈ ಮಹಾಲಿಂಗ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯ ಕೊಡುಗೈ ದಾನಿ ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ, ಧರ್ಮಪತ್ನಿ ಆಶಾ ಪ್ರಕಾಶ್ ಶೆಟ್ಟಿ, ಪುತ್ರ ಗೌರವ್ ಶೆಟ್ಟಿ, ಗುರ್ಮೆ ಫೌಂಡೇಶನ್ ಅಧ್ಯಕ್ಷರು ಸಮಾಜ ಸೇವಕರಾದ ಗುರ್ಮೆ ಸುರೇಶ್ ಶೆಟ್ಟಿ, ಯೂನಿವರ್ಸಿಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮುಖ್ಯಸ್ಥರು ಹಾಗೂ ಸಮಾಜ ಸೇವಕ ಉಪೇಂದ್ರ ಶೆಟ್ಟಿ,ರಾಜ್ಯ ,ದೇಶ , ವಿದೇಶಗಳಿಂದ ಹಲವಾರು ಗಣ್ಯರು, ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಆಗಮಿಸಿದ್ದರು.

ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದ ಈ ಕಾರ್ಯಕ್ರಮದಲ್ಲಿ, 1400 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಮೂರು ಕೋಟಿಗೂ ಅಧಿಕ ಹಣವನ್ನು ಅವರ ವೈವ್ಯಕ್ತಿಕ ಅಭಿವೃದ್ಧಿಗೆ ಹಾಗೂ ಸಾರ್ವಜನಿಕ ಕಾರ್ಯಕ್ರಮ ಗಳಿಗೆ ದಾನವನ್ನಾಗಿ ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಅವರು ನೀಡಿದ್ದು ವಿಶೇಷವಾಗಿತ್ತು.

ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ನಾನು ದಕ್ಷಿಣ ಕನ್ನಡದ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವನಾಗಿದ್ದು ಬಹಳ ಕಷ್ಟದ ಬಾಲ್ಯ ಜೀವನದಿಂದ ಮುಂದೆ ಬಂದು ಈಗ ನನ್ನ ಶ್ರಮದಿಂದ ಉದ್ಯಮಿಯಾಗಿದ್ದೇನೆ. ನನ್ನ ಕುಟುಂಬದ ಜೊತೆ ಎಲ್ಲ ಜನರು ನನ್ನ ಕುಟುಂಬವಿದ್ದಂತೆ ಎಲ್ಲ ಸಮುದಾಯದವರೂ ನನ್ನ ಕುಟುಂಬವಿದ್ದಂತೆ ಎಂದು ಭಾವನಾತ್ಮಕವಾಗಿ ಮಾತನಾಡಿದಾಗ ಇಡಿ ಸಭೆ ಭಾವಪರವಶವಾಗಿತ್ತು. ಸನ್ಮಾನಿತರ ಬಗ್ಗೆ ಗೌರವದ ಮಾತುಗಳನ್ನಾಡಿದರು. ತನ್ನ ಈ ಏಳಿಗೆಗೆ ಸಹಕರಿಸಿದ ಸ್ನೇಹಿತರನ್ನು, ಬಂದು ಬಾಂದವರನ್ನು ಕೃತಜ್ಞತೆ ಸಲ್ಲಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ …