ಶಿವಮೊಗ್ಗ: ವೃತ್ತಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಿರಂತರ ಪರಿಶ್ರಮ ವಹಿಸಿದರೆ ಉನ್ನತ ಸ್ಥಾನ ಗಳಿಸಲು ಸಾಧ್ಯವಿದೆ ಎಂದು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಚ್.ಎಂ.ಸುರೇಶ್ ಹೇಳಿದರು.
ಶಿವಮೊಗ್ಗ ನಗರದ ಎಟಿಎನ್‌ಸಿಸಿ ಕಾಲೇಜಿನ ಸಭಾಂಗಣದಲ್ಲಿ ಹಳೇಯ ವಿದ್ಯಾರ್ಥಿ ಸಂಘ, ಎನ್‌ಸಿಸಿ, ಎನ್‌ಎಸ್‌ಎಸ್, ಸ್ನೇಹಿತರು, ಆಪ್ತರಿಂದ ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ಸಮಿತಿಯಲ್ಲಿ 35 ವರ್ಷ ಪ್ರಾಧ್ಯಾಪಕ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ ಎಂದು ತಿಳಿಸಿದರು.
ಇದೇ ಕಾಲೇಜಿನಲ್ಲಿ ಓದಿದ ಅನುಭವ ಇದ್ದುದರಿಂದ ಕೆಲಸಕ್ಕೆ ಆಗಮಿಸಿದಾಗ ಸಂತೋಷವಾಗಿತ್ತು. ಬಹಳ ಉತ್ತಮ ಸಹಕಾರ ಸಹೋದ್ಯೋಗಿ ಮತ್ತು ಆಡಳಿತ ಮಂಡಳಿಯಿಂದ ದೊರಕಿತು. ವಿದ್ಯಾರ್ಥಿಗಳು ಒಳ್ಳೆಯ ಅಂಕಗಳಿಸಿ ಕಾಲೇಜಿಗೆ ಗೌರವ ತಂದರು. ಪ್ರತಿಭಾವಂತರಿಗೆ ಗೌರವ ಧನ ನೀಡುವ ಮೂಲಕ ಹಳೆಯ ವಿದ್ಯಾರ್ಥಿ ಬಳಗದ ಸದಸ್ಯರು ಸಹಕಾರ ನೀಡಿ ಯಶಸ್ವಿ ವಿದ್ಯಾರ್ಥಿಗಳಲ್ಲಿ ಹುಮಸ್ಸು ತುಂಬಿದರು ಎಂದರು.
ಅತ್ಯುತ್ತಮ ಶಿಕ್ಷಕ ವರ್ಗ, ಉತ್ತಮ ಕಾಲೇಜು ಮತ್ತು ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಇದ್ದುದರಿಂದ ವೃತ್ತಿ ಕ್ಷೇತ್ರದಲ್ಲೂ ಸಹಕಾರಿಯಾಯಿತು. ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು ಎಂದರು.
ನನ್ನ ಅಕ್ಕ ಭಾವ ಅವರ ನೆರವಿನಿಂದ ಪ್ರಾಥಮಿಕ ಶಿಕ್ಷಣ ಗ್ರಾಮಾಂತರ ಸರ್ಕಾರಿ ಶಾಲೆಯಲ್ಲಿ ಕಲಿತು, ಪದವಿ ಪೂರ್ವ ಶಿಕ್ಷಣವನ್ನು ಅರಗದಲ್ಲಿ ಪೂರೈಸಿದೆ. ಎಟಿಎನ್‌ಸಿಸಿಯಲ್ಲಿ ಪದವಿ, ಮಾನಸ ಗಂಗೋತ್ರಿಯಲ್ಲಿ ಮೈಸೂರು ಸ್ನಾತಕೋತ್ತರ ಪದವಿ ಪಡೆಯಲು ಸಹಕರಿಸಿದರು. ಪ್ರಾಚಾರ್ಯರಾಗಿ ಕೋಣಂದೂರು ಪದವಿ ಕಾಲೇಜಿಗೆ ಸೇರಿ 32 ವರ್ಷ ಸೇವೆ ಸಲ್ಲಿಸಿದೆ. ಮೂರುವರೆ ವರ್ಷದಿಂದ ಆಚಾರ್ಯ ತುಳಸಿ ಕಾಲೇಜಿನಲ್ಲಿ ಪ್ರಾಚಾರ್ಯನಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿದ್ದೇನೆ ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಸ್.ವಾಗೇಶ್, ಉಪಾಧ್ಯಕ್ಷ ಕೇಶವಮೂರ್ತಿ, ಖಚಾಂಚಿ ಸಿ.ಎಸ್.ಸುರೇಶ್, ಜಿ.ವಿಜಯಕುಮಾರ್, ದಯಾನಂದ್, ಕಾಶಿನಾಥ್, ಪ್ರಾಚಾರ್ಯ ಷರೀಪ್, ಜಗದೀಶ್, ನಾಗರಾಜ್, ಆನಂದ್, ವಸಂತ್ ಹೋಬಳಿದಾರ್ ಇದ್ದರು.