ಶಿವಮೊಗ್ಗ (ಬಿ.ಆರ್.ಪ್ರಾಜೆಕ್ಟ್) : ನಮ್ಮಲ್ಲಿನ ಅದೃಷ್ಟದ ಆಟಕ್ಕಿಂತ ಪರಿಶ್ರಮದ ಮೇಲೆ ಹೆಚ್ಚು ನಂಬಿಕೆಯಿಡಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ಇಂದು ಬಿ.ಆರ್.ಪ್ರಾಜೆಕ್ಟ್ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಓದದೇ ಅದೃಷ್ಟದ ನಂಬಿಕೆಯ ಹಿಂದೆ ಹೋದ ವ್ಯಕ್ತಿಯಲ್ಲಿ ಯಶಸ್ಸು ಎಂದಿಗೂ ಸಿಗುವುದಿಲ್ಲ. ವ್ಯಕ್ತಿಗತವಾದ ವ್ಯಕ್ತಿತ್ವ ಗುರುತಿಸಿಕೊಳ್ಳಲು ಪರಿಶ್ರಮದ ಅವಶ್ಯಕತೆಯಿದೆ. ಅವಮಾನಗಳನ್ನು ಎದುರಿಸುವ ಆತ್ಮವಿಶ್ವಾಸವಿರುವ ವ್ಯಕ್ತಿ ಸನ್ಮಾನಕ್ಕೆ ಎಂದೂ ಅರ್ಹ. ಸಾಧನೆಗಳು ಮಾತಗಬೇಕಿದೆ ವಿನಃ ಮಾತೇ ಸಾಧನೆಗಳಾಗಬಾರದು.
ಪುಸ್ತಕದ ವಿಷಯ ಮಸ್ತಕದೊಳಗಿನ ಜ್ಞಾನದ ಹರಿತವಾಗಲು ಅಧ್ಯಯನದ ಪರಿಶ್ರಮ ಹೆಚ್ಚಾಗಬೇಕಿದೆ. ನಾವು ಸಜ್ಜನರಾಗಬೇಕಿದೆ. ಕಪಟತ್ವವನ್ನು ಮರೆಮಾಚಿ ಸಜ್ಜನ ಎನಿಕೊಳ್ಳುವುದಕ್ಕಿಂತ, ಭಾವ, ವಾಕ್, ಕ್ರಿಯಾ ಶುದ್ದಿಗಳೊಂದಿಗೆ ಸಜ್ಜನರಾಗಬೇಕಿದೆ. ನಡವಳಿಕೆ ಇಲ್ಲದ ತಿಳುವಳಿಕೆ ವ್ಯರ್ಥ. ಬೆಟ್ಟದಷ್ಟು ಬುದ್ದಿಗಿಂತ ಮುಷ್ಟಿಯಷ್ಟು ಜ್ಞಾನಬೇಕಿದೆ.
ಮನುಷ್ಯನಲ್ಲಿ ಬೇಕಾಗಿರುವುದು ತಾಳ್ಮೆ, ಸಹನೆ ಮತ್ತು ಕೃತಜ್ಞತಾ ಮನೋಭಾವ. ಏರಿದ ಮೆಟ್ಟಿಲುಗಳನ್ನು ಎಂದಿಗೂ ಮರೆಯಬಾರದು. ನಮಗೆ ಕಲಿಸಿದ ಗುರುಗಳಿಗೆ, ಹಿರಿಯರಿಗೆ ಗೌರವಿಸುವ ಮನೋಭಾವ ಬೇಕಾಗಿದೆ. ಆಗ ಮಾತ್ರ ವಿದ್ಯೆ ಪರಿಪೂರ್ಣತೆಯೆಡೆಗೆ ತಲುಪಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ನಾಗಪತಿ ಭಟ್ ಮಾತನಾಡಿದರು.
ಪ್ರಾಂಶುಪಾಲರಾದ ಡಾ.ಶ್ರೀಪಾದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ವಿನುತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.