ಪ್ರತೀ ವರ್ಷದಂತೆ ಈ ಬಾರಿಯೂ ಸತತವಾಗಿ 23 ನೇ ವರ್ಷ ಸಾಮಾಜಿಕ ಜವಾಬ್ದಾರಿಯಿಂದ ರಕ್ತದಾನ ಮಾಡುವ ಮೂಲಕ ಮಾದರಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಹೆಮ್ಮೆ ಎಂದು ಜೆಸಿಐ ವಲಯ 24 ರ ಪೂರ್ವಾಧ್ಯಕ್ಷರು ಹಾಗೂ ನಗರದ ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್ ಆದ ಕೆ ವಿ ವಸಂತ ಕುಮಾರ್ ರವರು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.


2000 ನೇ ಇಷವಿಯಿಂದ ಪ್ರಾರಂಭಗೊಂಡು ಪ್ರತೀ ವರ್ಷವೂ ಮೊದಲನೆಯ ದಿನ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿ ಹೊಸ ವರ್ಷವನ್ನು ಸ್ವಾಗತಿಸುವ ಕಾರ್ಯವನ್ನು ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕವು ಮಾಡುತ್ತಾ ಬಂದಿದೆ, ಈ ವರೆಗೆ ರೋಟರಿ ರಕ್ತನಿಧಿಗೆ 1072 ಯೂನಿಟ್ ಗಳಷ್ಟು ರಕ್ತದಾನ ಮಾಡಿರುವುದು ನಮ್ಮ ಸಾಧನೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಾಮಾಜಿಕ ಕಾರ್ಯದಲ್ಲಿ ರೋಟರಿ ರಕ್ತ ನಿಧಿ ಸಂಸ್ಥೆಯ ಸಹಕಾರವು ಸ್ಮರಣೀಯ ಎಂದರು.
ಇದೇ ರೀತಿ ಶಿಬಿರವನ್ನು ಒಂದು ವಾರದವರೆಗೆ ಮುಂದುವರೆಸಿ 100 ಯೂನಿಟ್ ಗಳಷ್ಟು ರಕ್ತದಾನ ಮಾಡುವ ಗುರಿ ಹಾಕಿಕೊಳ್ಳಲು ಘಟಕದ ಸದಸ್ಯರಿಗೆ ಸಲಹೆ ನೀಡಿದರು.

ಸರ್ಜೀ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಧನಂಜಯ ಸರ್ಜೀಯವರು ಮಾತನಾಡಿ ದಾನಿಗಳು ಪದೇ ಪದೇ ರಕ್ತದಾನ ಮಾಡುವುದರಿಂದ ರಕ್ತ ತಿಳಿಯಾಗುವುದಲ್ಲದೆ, ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಮಾರಣಾಂತಿಕ ಕಾಯಿಲೆಗಳನ್ನೂ ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಒಬ್ಬ ವ್ಯಕ್ತಿ ನೀಡಿದ ರಕ್ತದಿಂದ 4 ಜನರ ಜೀವ ಉಳಿಸಿದ ಆತ್ಮತೃಪ್ತಿ ಸಿಗುತ್ತದೆ ಎಂದರು.
ಸೃಷ್ಟಿಯಲ್ಲಿ ಭಗವಂತನೂ ಸಹ ಕೊಡುವವರ, ದಾನಿಗಳ ಸಂಖ್ಯೆ ಹೆಚ್ಚಿಸಿ ಸೃಷ್ಟಿ ಮಾಡಿದ್ದಾನೆ. ಸಾರ್ವತ್ರಿಕ ದಾನಿ ರಕ್ತ ಗುಂಪಾದ O ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ಜನಿಸಿರುತ್ತಾರೆ ಹಾಗೂ ಸ್ವೀಕಾರ ಮಾಡುವವರು ಕಡಿಮೆ ಸಂಖ್ಯೆಯಲ್ಲಿ ಜನಿಸುತ್ತಾರೆ ಎಂಬ ವಿಷಯ ತಿಳಿಸಿದರು.
ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕವು ಪ್ರತೀ ವರ್ಷವೂ ನಡೆಸುತ್ತಿರುವ ಕಾರ್ಯವು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸುತ್ತಾ ತಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ತಿಳಿಸಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದರು.

ರೋಟರಿ ರಕ್ತ ನಿಧಿ ಸಂಸ್ಥೆಯ ಪ್ರತಿನಿಧಿಯಾದ ಶ್ರೀ ಸತೀಶ್ ರವರು ಮಾತನಾಡಿ ಈ ವರೆಗೂ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕವು ಪ್ರತೀ ವರ್ಷ ರಕ್ತದಾನ ಮಾಡುತ್ತಾ ಬಂದಿದ್ದು ಒಟ್ಟು 1072 ಯೂನಿಟ್ ಗಳಷ್ಟು ರಕ್ತದಾನ ಮಾಡಿರುತ್ತಾರೆ ಇದರಿಂದ 4288 ಜನರಿಗೆ ತುರ್ತು ಸಂದರ್ಭದಲ್ಲಿ ರಕ್ತ ದೊರೆಯಲು ಸಹಕಾರಿಯಾಗಿದೆ ಎಂದು ಪ್ರಶಂಸಿಸಿದರು.
ರಕ್ತನಿಧಿಯು 24 ಘಂಟೆ ತೆರೆದಿರಲು ಜೆಸಿಐ ಶಿವಮೊಗ್ಗ ಮಲ್ನಾಡ್ ಮತ್ತು ಇತರ ಸಂಘ ಸಂಸ್ಥೆಗಳು ಆಯೋಜಿಸುತ್ತಾ ಬಂದಿರುವ ರಕ್ತದಾನ ಶಿಬಿರಗಳೇ ಕಾರಣ ಎಂದರು.

ಇದೇ ವೇಳೆ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಅಧ್ಯಕ್ಷರು ಮತ್ತು ಸದಸ್ಯರಿಗೆ ರೋಟರಿ ರಕ್ತ ನಿಧಿ ಸಂಸ್ಥೆಯ ವತಿಯಿಂದ ಸೇವಾ ಪುರಸ್ಕಾರ ಪತ್ರ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷರು, ಸದಸ್ಯರು ಮತ್ತು ಹಲವು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಒಟ್ಟು 36 ಯೂನಿಟ್ ಗಳಷ್ಟು ರಕ್ತದಾನ ಮಾಡಿದರು. ಅಲ್ಲದೇ ಘಟಕದ ಸದಸ್ಯರ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಹ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗು ಮತ್ತು ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರಾದ ಜೇ ಸಿ ಕಿರಣ್ ಎನ್ ಪಿ ರವರು ಅಭಿನಂದಿಸಿದರು.

ಈ ಶಿಬಿರದಲ್ಲಿ ಕಾರ್ಯದರ್ಶಿ ಜೇ ಸಿ ಘನಶ್ಯಾಮ ಗಿರಿಮಾಜಿ, ಮಹಿಳಾ ಜೆಸಿ ಘಟಕದ ಶೃತಿ ಅಶೋಕ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…