ಗಣರಾಜ್ಯೋತ್ಸವದ ಪ್ರಯುಕ್ತ ಜ.26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ನಗರದ ತೋಟಗಾರಿಕೆ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ತಿಳಿಸಿದರು.
ಇಂದು ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ 61 ನೇ ಫಲ-ಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ, ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಈ ಫಲ-ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ವಿಶೇಷತೆಗಳೆಂದರೆ ಜಿಲ್ಲೆಯ ಸಸ್ಯ ಸಂಪತ್ತು ಮತ್ತು ವನ್ಯಜೀವಿ ಆಕೃತಿಗಳು ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್‍ರವರ ಹೂವಿನ ಕಲಾಕೃತಿ ‘ಗಂಧದ ಗುಡಿ’ ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿ, ‘ಶಿವಮೊಗ್ಗ, ಸ್ಮಾರ್ಟ್ ಸಿಟಿ’ ಮಾದರಿ, ಹೂವಿನ ಫೆÇೀಟೋ ಫ್ರೇಮ್‍ಗಳು ಹಾಗೂ ಮಕ್ಕಳನ್ನು ಆಕರ್ಷಸುವ ಹೂವಿನ ಗೊಂಬೆಗಳು.
ಫಲ-ಪುಷ್ಪ ಪ್ರದರ್ಶನದಲ್ಲಿ ರೈತರಿಗಾಗಿ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶಿಕೆಗಳ ಸ್ಪರ್ಧೆ, ಮಹಿಳೆಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ(ವಿವಿಧ ಸಸ್ಯ ಭಾಗಗಳನ್ನು, ಹೂ, ಮೊಗ್ಗು, ಎಲೆ, ಹಣ್ಣು, ಬೀಜ, ಧಾನ್ಯಗಳನ್ನು ಬಳಸಿ ರಂಗೋಲಿ ರಚನೆ), ಮನೆ/ಶಾಲೆ/ಅಂಗನವಾಡಿ ಕಚೇರಿ/ಖಾಸಗಿ ಸಂಸ್ಥೆಗಳಿಗೆ ಕೈತೋಟ, ತಾರಸಿ ತೋಟ ಮತ್ತು ಉದ್ಯಾನ ವನಗಳ ಸ್ಪರ್ಧೆ ಏರ್ಪಡಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಬೆಳೆದ ವಿಶೇಷ ರೀತಿಯ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕೆ ಉತ್ಪನಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ
ಜಿಲ್ಲಾ ಪಂಚಾಯತ್ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‍ಆರ್‍ಎಲ್‍ಎಂ)-ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ವೈವಿಧ್ಯಮಯ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇಲ್ಲಿ ಆಯೋಜಿಸಲಾಗಿದೆ.
ಕೃಷಿ, ಪಶುಸಂಗೋಪನೆ, ರೇμÉ್ಮ, ಮೀನುಗಾರಿಕೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಸ್ತ್ರೀ ಶಕ್ತಿ ಸಂಘಗಳು, ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳು, ಹನಿನೀರಾವರಿ ಉಪಕರಣಗಳು, ಅಲಂಕಾರಿಕ ಹೂ ಗಿಡಗಳ ನರ್ಸರಿ ಇತ್ಯಾದಿ ಒಟ್ಟು ವಿವಿಧ ರೀತಿಯ 80 ಮಳಿಗೆಗಳು ಪ್ರದರ್ಶನದಲ್ಲಿರುತ್ತವೆ.
ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರದ ಹುಲಿ ಮತ್ತು ಸಿಂಹಧಾಮದ ವತಿಯಿಂದ ವಿವಿಧ ವನ್ಯಜೀವಿ ಲೋಕದ ಪರಿಚಯ ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳಾದ ಕೈತೋಟದ ಪ್ರಾತ್ಯಕ್ಷತೆ, ವಿವಿಧ ಅಲಂಕಾರಿಕೆ ಹೂಗಳು, ಕುಬ್ಜಗಿಡಗಳು(ಬೋನ್ಸಾಯ್), ಅಣಬೆ ಪ್ರಾತ್ಯಕ್ಷತೆ ಹಾಗೂ ಜೇನು ಕೃಷಿ ಕುರಿತಾದ ಪ್ರಾತ್ಯಕ್ಷತೆ ಹಾಗೂ ಸುಮಾರು 5 ಸಾವಿರ ವಿವಿಧ ಜಾತಿಯ ಆಕರ್ಷಕ ಹೂ ಕುಂಡಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಫಲ-ಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಶುಚಿಯಾದ ಮತ್ತು ರುಚಿಯಾದ ಆಹಾರೋತ್ಪನ್ನಗಳ ಆಹಾರ ಮೇಳವನ್ನು ಸಹ ಏರ್ಪಡಿಸಲಾಗಿದೆ.
ಪ್ರವೇಶ ಶುಲ್ಕ ವಯಸ್ಕರಿಗೆ ರೂ.10 ಮತ್ತು ಮಕ್ಕಳಿಗೆ ರೂ.5 ನಿಗದಿಗೊಳಿಸಿದ್ದು ಶಿಕ್ಷಕರ ಜೊತೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಉಚಿತವಾಗಿರುತ್ತದೆ.
ಜ.27 ಮತ್ತು 28 ರಂದು ಸಂಜೆ 6 ರಿಂದ 8 ರವರೆಗೆ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವಿರುತ್ತದೆ. ಆ.29 ರಂದು ಸಮಾರೋಪ ಸಮಾರಂಭವಿದ್ದು ಫಲ-ಪುಷ್ಪ ಪ್ರದರ್ಶನದ ವಿವಿಧ ಸ್ಪರ್ಧೆಗಳನ್ನು ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಭಾಗವಹಿಸಿದ ಎಲ್ಲಾ ಸರ್ಕಾರಿ/ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಹರಳೆಣ್ಣೆ ಸಿದ್ದಪ್ಪ, ಖಜಾಂಚಿ ರಘು ದುಮ್ಮಳ್ಳಿ, ನಿರ್ದೇಶಕರಾದ ಚಂದ್ರಕಾಂತ ಅಸಗೋಡು, ಚಂದ್ರಕಲಾ, ಆಶಾ ಶೇಷಾದ್ರಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ವನಮಾಲಾ ಇದ್ದರು.